11-ಇ ನಕ್ಷೆ ವಿಂಗಡಣೆಗೆ ಅವಕಾಶ ನೀಡಿ...

Yashpal
Published on

ಕಂದಾಯ ಸಚಿವರಿಗೆ ಶಾಸಕ ಯಶ್​ಪಾಲ್​ ಮನವಿ

7.5 ಸೆಂಟ್ಸ್​ ಮಿತಿಗೆ ಮರು ಆದೇಶಕ್ಕೆ ಒತ್ತಾಯ

ವಿಜಯವಾಣಿ ಸುದ್ದಿಜಾಲ ಉಡುಪಿ

ಕೃಷಿ ಭೂಮಿಯನ್ನು 11&ಇ ನಕ್ಷೆ ಮೂಲಕ ವಿಂಗಡಣೆಗೆ ಅವಕಾಶ, ಮಳೆ ಹಾನಿ ಪರಿಹಾರ ಹಾಗೂ ವಸತಿ ಯೋಜನೆಯಡಿ ಮಂಜೂರಾದ ಬಾಕಿ ಅನುದಾನ ಬಿಡುಗಡೆ ಮಾಡುವಂತೆ ಉಡುಪಿಗೆ ಜುಲೈ 30ರಂದು ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮನವಿ ಮಾಡಿದ್ದಾರೆ.

ಉಡುಪಿ ಜಿಲ್ಲೆಯು ಭೌಗೋಳಿಕವಾಗಿ ಇತರ ಜಿಲ್ಲೆಗಳಿಗಿಂತ ವಿಭಿನ್ನವಾಗಿದೆ. ಸಣ್ಣ ಹಾಗೂ ಅತಿ ಸಣ್ಣ ಹಿಡುವಳಿದಾರರಿಂದ ಕೂಡಿದ ಭೂ ಪ್ರದೇಶವಾಗಿದೆ. ಹಿಂದಿನಿಂದಲೂ ಕಂದಾಯ ನಿಯಮ ರೂಪಿಸುವಾಗ ಉಡುಪಿ ಜಿಲ್ಲೆಯೂ ಸೇರಿದಂತೆ ಅವಿಭಜಿತ ದ.ಕ. ಜಿಲ್ಲೆಗೆ ರಿಯಾಯಿತಿ ನೀಡಲಾಗುತ್ತಿತ್ತು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ನಿಯಮದಿಂದ ತೊಡಕು

22
ಯಶ್​ಪಾಲ್

ರಾಜ್ಯ ಸರ್ಕಾರದ ಪ್ರಸ್ತುತ ಆದೇಶದಂತೆ ಮನೆ ನಿಮಾರ್ಣಕ್ಕೆ ಭೂ ಪರಿವರ್ತನೆ ಪೂರ್ವದಲ್ಲಿ ಕೃಷಿ ಭೂಮಿ ವಿಂಗಡಿಸಲು ಕನಿಷ್ಠ 50 ಸೆಂಟ್ಸ್​ ಮಿತಿ ನಿಗದಿ ಮಾಡಲಾಗಿದೆ. ಜಿಲ್ಲೆಯಲ್ಲಿ 50 ಸೆಂಟ್ಸ್​ಗಿಂತ ಕಡಿಮೆ ಜಾಗ ಹೊಂದಿರುವ ರೈತರೇ ಹೆಚ್ಚಿದ್ದಾರೆ. ಅವರಿಗೆ ಹಲವು ಕಾರಣಗಳಿಗಾಗಿ 11-ಇ ನಕ್ಷೆ ಆಧಾರದಲ್ಲಿ ಜಾಗ ವಿಂಗಡಿಸುವ ಅನಿವಾರ್ಯತೆ ಇರುತ್ತದೆ. ವಿವಿಧ ಕಾರಣಗಳಿಗಾಗಿ ಜಾಗ ಮಾರಾಟ ಮಾಡುತ್ತಾರೆ. ಆದರೆ, ಸರ್ಕಾರದ ಈ ನಿಯಮದಿಂದ ತೊಡಕಾಗುತ್ತಿದೆ ಎಂದು ಗಮನಕ್ಕೆ ತಂದಿದ್ದಾರೆ.

7.5 ಸೆಂಟ್ಸ್​ ಮಿತಿಗೆ ನಿಗದಿಸಿ

ನಗರ ವ್ಯಾಪ್ತಿಯೂ ಸೇರಿದಂತೆ ಗ್ರಾಮೀಣ ಭಾಗದ ನೂರಾರು ಕುಟುಂಬಗಳು ನಿವೇಶನಕ್ಕಾಗಿ ಹಲವಾರು ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿದ್ದು, ಸರ್ಕಾರಿ ಜಾಗದ ಲಭ್ಯತೆ ಇಲ್ಲದಾಗಿದೆ. ಹೀಗಾಗಿ ಸರ್ಕಾರದ ಸದರಿ ಆದೇಶದಿಂದ ಕಡಿಮೆ ದರದಲ್ಲಿ ಹಾಗೂ ಸಣ್ಣ ಜಾಗ ಖರೀದಿಸಿ ಮನೆ ನಿರ್ಮಿಸುವ ಉದ್ದೇಶ ಈಡೇರುವುದಿಲ್ಲ. ಇದರಿಂದ ನಿರ್ಮಾಣ ಕ್ಷೇತ್ರಕ್ಕೂ ನಷ್ಟವಾಗುತ್ತಿದೆ. ಹೀಗಾಗಿ ಪ್ರಸ್ತುತ ನಿಯಮ ಹಿಂಪಡೆದು ಈ ಹಿಂದಿನಂತೆ 7.5 ಸೆಂಟ್ಸ್​ ಮಿತಿಗೆ ಮರು ಆದೇಶ ಹೊರಡಿಸಬೇಕು ಎಂದು ಸಚಿವರಿಗೆ ಯಶ್​ಪಾಲ್​ ಒತ್ತಾಯಿಸಿದ್ದಾರೆ.

ಪುನರ್ವಸತಿಗೆ ಅನುದಾನ ನೀಡಿ

ಉಡುಪಿ ತಾಲೂಕಿನಲ್ಲಿ ನೆರೆ ಸಂತ್ರಸ್ತರ ಪುನರ್ವಸತಿಗೆ ರಾಜೀವ ಗಾಂಧಿ ವಸತಿ ನಿಗಮದಿಂದ ಈವರೆಗೂ ಸಂಪೂರ್ಣ ಅನುದಾನ ಬಿಡುಗಡೆಯಾಗಿಲ್ಲ. ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ಭಾರಿ ನಷ್ಟವಾಗಿದೆ. ಕಡಲು ಕೊರೆತದ ಸಮಸ್ಯೆ, ಸುಂಟರಗಾಳಿಯಿಂದ ನೂರಾರು ಮರಗಳು ಬಿದ್ದು ವಿದ್ಯುತ್​ ಕಂಬ, ಮನೆಗಳಿಗೆ ಹಾನಿಯಾಗಿದೆ. ರಸ್ತೆ, ಮೋರಿ, ಶಾಲಾ ಕಟ್ಟಡ, ಕಾಲುಸಂಕಗಳು ಹಾಗೂ ಸೇತುವೆಗಳು ಅಪಾಯದಲ್ಲಿವೆ. ಗ್ರಾಮೀಣ ರಸ್ತೆಗಳು ಹೊಂಡಮಯವಾಗಿದೆ. ಪ್ರಾಕೃತಿಕ ವಿಕೋಪದಡಿ ಉಡುಪಿ ಜಿಲ್ಲೆಗೆ ಸರ್ಕಾರದಿಂದ ವಿಶೇಷ ಅನುದಾನ ಮಂಜೂರು ಮಾಡಿಸುವಂತೆ ಸಚಿವರಿಗೆ ಯಶ್​ಪಾಲ್​ ಸುವರ್ಣ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net