

ಉಡುಪಿ: ಪೊಲೀಸರ ಆರೋಗ್ಯ ಕಾಪಾಡುವುದು ಕೂಡ ಇಲಾಖೆ ಉದ್ದೇಶವಾಗಿದೆ. ಇದರಿಂದ ಕಾರ್ಯಕ್ಷಮತೆಯೂ ಉತ್ತಮವಾಗಲಿದೆ. ಪೊಲೀಸರು ಆರೋಗ್ಯ ಕಡೆಗೂ ಗಮನಹರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.
ಬುಧವಾರ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಡಿಟೋರಿಯಂನಲ್ಲಿ ಜಿಲ್ಲಾ ಪೊಲೀಸ್ ಹಾಗೂ ಪರೀಕ ಸೌಖ್ಯವನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನಡೆದ ನವಚೇತನ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಪೊಲೀಸ್ ಸಿಬಂದಿಗೆ ಕರ್ತವ್ಯದಲ್ಲಿ ಹಲವು ಒತ್ತಡಗಳಿವೆ. ವಿಐಪಿಗಳ ಆಗಮನದ ಸಂದರ್ಭ ಊಟ&ತಿಂಡಿ ಬಿಟ್ಟು ಕೆಲಸ ಮಾಡಬೇಕಾಗುತ್ತದೆ. ಕೆಲಸದ ಒತ್ತಡದಿಂದ ಬೊಜ್ಜು ಹಾಗೂ ಕಾಯಿಲೆಗಳು ಬರುವುದು ಸಹಜ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದರು.
ಚಲನಚಿತ್ರ ನಟ ಪ್ರಮೋದ್ ಶೆಟ್ಟಿ ಮಾತನಾಡಿದರು. ಅಂತಾರಾಷ್ಟ್ರೀಯ ಕ್ರೀಡಾಪಟು ಅಭಿನ್ ದೇವಾಡಿಗ, ಧರ್ಮಸ್ಥಳದ ಎಸ್ಡಿಎಂ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಪರೀಕ ಸೌಖ್ಯವನದ ಮುಖ್ಯವೈದ್ಯಾಧಿಕಾರಿ ಡಾ. ಗೋಪಾಲ್ ಪೂಜಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ಎಸ್.ನಾಯ್ಕ್ ಉಪಸ್ಥಿತರಿದ್ದರು. ರೋಹಿತ್ ಕುಮಾರ್ ಪ್ರಸ್ತಾವನೆಗೈದರು. ಯೋಗೀಶ್ ನಿರೂಪಿಸಿದರು.