ಟ್ಯಾಕ್ಸಿ-ಮ್ಯಾಕ್ಸಿ ಕ್ಯಾಬ್​ಗೆ ಪ್ಯಾನಿಕ್​ ಬಟನ್​, ಜಿಪಿಎಸ್​ ಅಳವಡಿಸಲ್ಲ

UDP-23-1-Taxi Strike
ಜಿಪಿಎಸ್​ ಹಾಗೂ ಪ್ಯಾನಿಕ್​ ಬಟನ್​ ಅಳವಡಿಕೆ ಕಡ್ಡಾಯ ವಿರೋಧಿಸಿ ಉಡುಪಿ ಡಿಸಿ ಕಚೇರಿಯ ಬಳಿ ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್​ ಅಸೋಸಿಯೇಷನ್​ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಕೆ.ರಘಪತಿ ಭಟ್​ ಮಾತನಾಡಿದರು. ರಮೇಶ್​ ಕುಂದಾಪುರ, ಅಂಬರೀಶ್​, ಗುರುರಾಜ್​ ಕುಂದಾಪುರ, ರಮೇಶ್​ ಕೋಟ್ಯಾನ್​, ಪ್ರಕಾಶ್​ ಅಡಿಗ, ಸತೀಶ್​ ನಾಯಕ್​, ರಾಘವೇಂದ್ರ ಸೋಮಯಾಜಿ ಇತರರಿದ್ದರು
Published on

ಕೆ.ರಘಪತಿ ಭಟ್​ ಎಚ್ಚರಿಕೆ | ಚಾಲಕ-ಮಾಲಕರ ಸಂಘಟನೆಗಳ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಹೊಸ ಪ್ರವಾಸಿ ವಾಹನ ಶೋರೂಂನಿಂದ ಮಾರುಕಟ್ಟೆಗೆ ಬರುವಾಗಲೇ ಪ್ಯಾನಿಕ್​ ಬಟನ್​ ಹಾಗೂ ಜಿಪಿಎಸ್​ ಅಳವಡಿಸಬೇಕು. ಹಳೆಯ ಪ್ರವಾಸಿ ವಾಹಗಳಿಗೆ ಯಾವುದೇ ಕಾರಣಕ್ಕೂ ನಾವು ಪ್ಯಾನಿಕ್​ ಬಟನ್​ ಹಾಗೂ ಜಿಪಿಎಸ್​ ಅಳವಡಿಸುವುದಿಲ್ಲ. ಈ ವಿಚಾರವಾಗಿ ಸಾರಿಗೆ ಅಧಿಕಾರಿಗಳು ಕಿರುಕುಳ ಕೊಟ್ಟರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಉಡುಪಿ ಜಿಲ್ಲಾ ಟಾಕ್ಸಿಮನ್ಸ್​ ಮತ್ತು ಮಾಕ್ಸಿಕ್ಯಾಬ್​ ಅಸೋಸಿಯೇಷನ್​ನ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ರಘಪತಿ ಭಟ್​ ಎಚ್ಚರಿಕೆ ನೀಡಿದರು.

ಪ್ರವಾಸಿ ವಾಹನಗಳಿಗೆ ಅವೈಜ್ಞಾನಿಕ ಪ್ಯಾನಿಕ್​ ಬಟನ್​ ಮತ್ತು ಜಿಪಿಎಸ್​ ಅಳವಡಿಕೆ ವಿರೋಧಿಸಿ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್​ ಮತ್ತು ಮ್ಯಾಕ್ಸಿ ಕ್ಯಾಬ್​ ಅಸೋಸಿಯೇಷನ್​ (ರಿ.) ನೇತೃತ್ವದಲ್ಲಿ ಹಾಗೂ ಕರ್ನಾಟಕ ಟ್ಯಾಕ್ಸಿ ಡೆವರ್ಸ್​ ಆರ್ಗನೈಸೇಷನ್​ ಮತ್ತು ಉಡುಪಿ ಜಿಲ್ಲೆಯ ಸಮಾನ ಮನಸ್ಕ ಪ್ರವಾಸಿ ವಾಹನ ಸಂಘಟನೆಗಳ ಚಾಲಕ-ಮಾಲಕರ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಅಧಿಕಾರಿಗಳಿಗೆ ಕಮಿಷನ್​ ದಂಧೆ

ರಾಜ್ಯದಲ್ಲಿ ನವೆಂಬರ್​ ತಿಂಗಳ ವರೆಗೆ ಕಾಲಾವಕಾಶ ಇದ್ದರೂ ಸಹ ಜಿಲ್ಲಾ ಸಾರಿಗೆ ಅಧಿಕಾರಿಗಳು ಜಿಪಿಎಸ್​ ಹಾಗೂ ಪ್ಯಾನಿಕ್​ ಬಟನ್​ ಅಳವಡಿಸಿಲು ಒತ್ತಡ ಹಾಕುತ್ತಿದ್ದಾರೆ. ಅದಕ್ಕಾಗಿಯೇ ಎಫ್​ಸಿಯನ್ನೂ ಕೊಡುತ್ತಿಲ್ಲ. ಈ ವ್ಯವಸ್ಥೆ ಅಳವಡಿಕೆಗೆ ಕೇಂದ್ರ ಸಾರಿಗೆ ಇಲಾಖೆ 7,550 ರೂ. ದರ ನಿಗದಿ ಮಾಡಿದ್ದರೂ ಸಹ ರಾಜ್ಯದಲ್ಲಿ 13ರಿಂದ 15 ಸಾವಿರ ರೂ ಪಡೆಯುತ್ತಿದ್ದಾರೆ. ಇದರಲ್ಲಿ ಕೇಂದ್ರ ಹಾಗೂ ರಾಜ್ಯದ ಅಧಿಕಾರಿಗಳಿಗೆ, ಜಿಲ್ಲೆಯ ಆರ್​ಟಿಒಗಳಿಗೆ ಕಮಿಷನ್​ ಸಿಗಲಿದೆ. ಹೀಗಾಗಿಯೇ ಅವರು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಡಳಿತಕ್ಕೆ ಮನವಿ

ಇದೇ ವಿಷಯದ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್​. ಹಾಗೂ ಆರ್​ಟಿಒ ಎಲ್​.ಪಿ. ನಾಯಕ್​ ಅವರಿಗೆ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಲಾಯಿತು.

Manavi

ಕೆಟಿಡಿಒ ರಾಜ್ಯಾಧ್ಯಕ್ಷ ರಮೇಶ್​ ಕುಂದಾಪುರ, ಜಿಲ್ಲಾಧ್ಯಕ್ಷ ಅಂಬರೀಶ್​, ರಾಜ್ಯ ಕೋಶಾಧಿಕಾರಿ ಗುರುರಾಜ್​ ಕುಂದಾಪುರ, ಉಡುಪಿ ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್​ ಅಸೋಸಿಯೇಷನ್​ನ ಪ್ರ. ಕಾರ್ಯದರ್ಶಿ ರಮೇಶ್​ ಕೋಟ್ಯಾನ್​, ಪ್ರಧಾನ ಕೋಶಾಧಿಕಾರಿ ಪ್ರಕಾಶ್​ ಅಡಿಗ, ಉಪಾಧ್ಯಕ್ಷರಾದ ಸತೀಶ್​ ನಾಯಕ್​, ರಾಘವೇಂದ್ರ ಸೋಮಯಾಜಿ ಹಾಗೂ ರವಿ ಶೆಟ್ಟಿ, ಹರೀಶ್​, ಜಯಕರ್​ ಕುಂದರ್​, ವಿಕ್ರಂ, ಕೃಷ್ಣ ಕೋಟ್ಯಾನ್​, ಸತೀಶ್​ ಶೆಟ್ಟಿ ಹಾಗೂ ನೂರಾರು ಮಂದಿ ಚಾಲಕ-ಮಾಲಕರು ಪಾಲ್ಗೊಂಡಿದ್ದರು.

ಆರ್​ಟಿಒ ಕಚೇರಿಗೆ ಬೀಗ ಜಡಿಯುತ್ತೇವೆ

ಕಳ್ಳತನದಲ್ಲಿ ಬಾಡಿಗೆ ಹೋಗುವ ವೈಟ್​ ಬೋರ್ಡ್​ ವಾಹನಗಳನ್ನು ಮೊದಲು ತಡೆದು, ಕಾನೂನು ಕ್ರಮ ಕೈಗೊಳ್ಳಬೇಕು. ಆರ್​ಟಿಒ ಅಧಿಕಾರಿಗಳು ಎ್​ಸಿ ನವೀಕರಣ ಮಾಡಿಕೊಟ್ಟಿಲ್ಲ ಎಂದು ನಾವುಗಳು ಯಾರೂ ಟ್ಯಾಕ್ಸಿಯನ್ನು ಮನೆಯಲ್ಲಿ ಸುಮ್ಮನೆ ನಿಲ್ಲಿಸುವುದಿಲ್ಲ. ಎಫ್​ಸಿ ಕೊಡದಿದ್ದರೂ ಟ್ಯಾಕ್ಸಿ ಚಲಾಯಿಸುತ್ತೇವೆ. ಮುಂದೆ ಯಾವುದೇ ಅವಘಡ ಸಂಭವಿಸಿದರೆ ಅದಕ್ಕೆ ಆರ್​ಟಿಒಗಳೇ ಹೊಣೆ. ಉಡುಪಿ ಜಿಲ್ಲೆಯಲ್ಲಿ 2,660 ಟ್ಯಾಕ್ಸಿಗಳಿದ್ದು, ವಿನಾಕಾರಣ ತೊಂದರೆ ನೀಡಿದರೆ ಎಲ್ಲ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿ, ಆರ್​ಟಿಒ ಕಚೇರಿಗೆ ಮುತ್ತಿಗೆ ಹಾಕಿ ಬೇಗ ಜಡಿಯುತ್ತೇವೆ ಎಂದು ಕೆ.ರಘಪತಿ ಭಟ್​ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net