

ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಜನರ ಭಾವನೆಗಳಿಗೆ ನೋವುಂಟು ಮಾಡುವ ಕೆಲಸ ನಡೆಯುತ್ತಲೇ ಇದೆ. ಅಧಿಕಾರಕ್ಕೆ ಬರಬೇಕೆಂಬ ಒಂದೇ ಕಾರಣದಿಂದ ಒಂದಿಷ್ಟು ಆಶ್ವಾಸನೆ ಘೋಷಿಸಿ, ಆಡಳಿತಕ್ಕೆ ಬಂದಿದ್ದಾರೆ. ಇದೀಗ ಸಿದ್ದರಾಮಯ್ಯ ಅವರು ತಾನು ನಿರಂತರ 16 ಸಲ ಬಜೆಟ್ ಮಂಡಿಸಿದ ಸಿಎಂ ಎಂಬ ದಾಖಲೆ ನಿರ್ಮಿಸಲು ಆಯ-ವ್ಯಯ ಮಂಡಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಬಹುಸಂಖ್ಯಾತರನ್ನು ಕಡೆಗಣಿಸಿ, ಅಲ್ಪ ಸಂಖ್ಯಾತರ ಓಲೈಕೆ ಮಾಡುವ ಬಜೆಟ್ ಆಗಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಕಚೇರಿ ಮುಂದೆ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ವಕೀಲ ಬಾಲಕೃಷ್ಣ ಶೆಟ್ಟಿ ಕರ್ಜೆ ಬಜೆಟ್ ವಿಶ್ಲೇಷಣೆ ಮಾಡಿದರು. ಶಾಸಕ ಯಶ್ಪಾಲ್ ಸುವರ್ಣ, ಪ್ರಧಾನ ಕಾರ್ಯದರ್ಶಿ ದಿನಕರ್ ಶೆಟ್ಟಿ ಹೆರ್ಗ, ನಗರಸಭಾ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಉಪಾಧ್ಯೆ ರಜಿನಿ ಹೆಬ್ಬಾರ್, ರಾಘವೇಂದ್ರ ಕುಂದರ್, ಶ್ರೀಕಾಂತ್ ನಾಯಕ್, ಮಹಾವೀರ್ ಹೆಗ್ಗಡೆ, ಶ್ರೀನಿಧಿ ಹೆಗ್ಡೆ, ನವೀನ್ ನಾಯಕ್, ಜಿತೇಂದ್ರ ಶೆಟ್ಟಿ, ಶಶಾಂಕ್ ಶಿವತ್ತಾಯ, ಶಿವಕುಮಾರ್ ಅಂಬಲಪಾಡಿ, ಗಿರೀಶ್ ಅಂಚನ್, ದಿನೇಶ್ ಅಮೀನ್, ಮಹಿಳಾ ಪದಾಧಿಕಾರಿಗಳಾದ ಶಿಲ್ಪಾ ಸುವರ್ಣ, ಸಂಧ್ಯಾ ರಮೇಶ್, ವೀಣಾ ಶೆಟ್ಟಿ, ನಳಿನಿ ಪ್ರದೀಪ್, ನಯನಾ ಗಣೇಶ್ ಇತರರಿದ್ದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಜನರ ಮೂಗಿಗೆ ತುಪ್ಪ ಸವರಿದ ಸಿದ್ದರಾಮಯ್ಯ, ಕಡ್ಲೆಪುರಿ ಹಂಚಿದಂತೆ ಬಜೆಟ್ನಲ್ಲಿ ಸ್ವಲ್ಪ ಸ್ವಲ್ಪ ಅನುದಾನ ಕೊಟ್ಟಿದ್ದಾರೆ. ಒಂದೇ ಒಂದು ಅಭಿವೃದ್ಧಿ ಕಾರ್ಯ ರಾಜ್ಯದಲ್ಲಿ ಆಗಿಲ್ಲ. ಜನರಿಂದ ಪಿಕ್ಪಾಕೆಟ್ ಮಾಡಿ ಒಂದು ಕಡೆಯ ದರ ಹೆಚ್ಚಿಸಿ ಅದನ್ನೇ ಇನ್ನೊಬ್ಬರಿಗೆ ಕೊಡುವ ಕೆಲಸ ಮಾಡಿದ್ದಾರೆ. ಹಿಂದುಳಿದ ವರ್ಗಗಳಿಗೆ 39 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ ಎನ್ನುತ್ತಾರೆ. ಆದರೆ, ಅಭಿವೃದ್ಧಿಯಲ್ಲಿ ಶೂನ್ಯ. ಎಸ್ಸಿ, ಎಸ್ಟಿ ಸಮುದಾಯಕ್ಕೆ ಮನೆ ಕಟ್ಟಲು ಇಟ್ಟಿರುವ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಮಾತೆತ್ತಿದರೆ ಕೇಂದ್ರ ಬಿಜೆಪಿ ಸರ್ಕಾರ ಏನು ಮಾಡುತ್ತಿದೆ? ದೇಶದಲ್ಲೇ ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಾರೆ ಎನ್ನುತ್ತಾರೆ. ಶೇ.18 ಜಿಎಸ್ಟಿಯಲ್ಲಿ ಶೇ.9 ಮಾತ್ರ ಕೇಂದ್ರ ಸರ್ಕಾರಕ್ಕೆ ಭರಿಸಿ, ಉಳಿದ ಶೇ.9 ತೆರಿಗೆ ಅಂದರೆ ಶೇ.50 ತೆರಿಗೆ ಹಣ ನೀವೇ ಇಟ್ಟುಕೊಂಡು ಯಾಕೆ ಸುಳ್ಳು ಹೇಳುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.