More

    ಉಡುಪಿಯ ಬೆಂಬಿಡದ ಕರೊನಾ, ಒಂದೇ ದಿನ 92 ಕೇಸ್, ಸೋಂಕಿತರ ಸಂಖ್ಯೆ 564ಕ್ಕೆ ಏರಿಕೆ

    ಉಡುಪಿ: ಜೂನ್ 1ರಂದು 73, ಎರಡರಂದು 150, ಮೂರರಂದು 61, ನಾಲ್ಕರಂದು 92…
    ಇದು ಉಡುಪಿ ಜಿಲ್ಲೆಯ ಕರೊನಾ ಸೋಂಕಿತರ ಪಟ್ಟಿಗೆ ಕಳೆದ ನಾಲ್ಕು ದಿನಗಳಿಂದ ಸೇರ್ಪಡೆಯಾಗುತ್ತಿರುವವರ ಸಂಖ್ಯೆ. ಇವರಲ್ಲಿ ಬಹುತೇಕ ಎಲ್ಲರೂ ಮಹಾರಾಷ್ಟ್ರದಿಂದ ವಾಪಸ್ಸಾದವರು.

    ಜಿಲ್ಲೆಯಲ್ಲಿ ಗುರುವಾರ ಪತ್ತೆಯಾದ 92 ಮಂದಿಯಲ್ಲಿ 78 ಪುರುಷರು, 9 ವರ್ಷದ ಬಾಲಕಿ ಸಹಿತ 14 ಮಹಿಳೆಯರಿದ್ದಾರೆ. ಸೋಂಕಿತರೆಲ್ಲರೂ ಮಹಾರಾಷ್ಟ್ರದಿಂದ ಆಗಮಿಸಿದವರು. ಒಬ್ಬರು ದಕ್ಷಿಣ ಕನ್ನಡ ಮೂಲದವರಾಗಿದ್ದು, ಅಲ್ಲಿನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಅಲ್ಲಿಯೇ ಆಸ್ಪತ್ರೆಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಗುರುವಾರ 3,119 ವರದಿ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದ 20 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 108 ಮಂದಿ ಗುಣಮುಖರಾಗಿದ್ದಾರೆ. 454 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. 1732 ವರದಿ ಬರಲು ಬಾಕಿ ಇದೆ. 7 ಮಂದಿ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

    ಪೊಲೀಸರು ಗುಣಮುಖ: ಕರೊನಾ ಸೋಂಕಿತರಾಗಿದ್ದ ಜಿಲ್ಲೆಯ ಡಿವೈಎಸ್ಪಿ ಸಹಿತ ಎಲ್ಲ 9 ಪೊಲೀಸರು ಗುಣಮುಖರಾಗಿದ್ದಾರೆ. ಬುಧವಾರ ಐದು ಮಂದಿ ಬಿಡುಗಡೆಯಾಗಿದ್ದಾರೆ. ಇತರ ನಾಲ್ವರು ಶನಿವಾರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

    ಮತ್ತೆ ಮೊದಲ ಸ್ಥಾನಕ್ಕೆ: ಗುರುವಾರ 92 ಮಂದಿಗೆ ಸೋಂಕು ತಗುಲುವುದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 564ಕ್ಕೆ ಏರಿಕೆಯಾಗಿದೆ. 510 ಸೋಂಕಿತರನ್ನು ಹೊಂದಿರುವ ಕಲಬುರಗಿಯನ್ನು ಹಿಂದಿಕ್ಕಿ ಉಡುಪಿ ಮತ್ತೆ ಮೊದಲ ಸ್ಥಾನಕ್ಕೆ ತಲುಪಿದೆ. ಮಂಗಳವಾರ 150 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಉಡುಪಿ ಮೊದಲ ಸ್ಥಾನಕ್ಕೇರಿತ್ತು. ಬುಧವಾರ ಕಲಬುರಗಿ 105 ಪ್ರಕರಣಗಳನ್ನು ದಾಖಲಿಸಿದ್ದರಿಂದ ಉಡುಪಿ ಎರಡನೇ ಸ್ಥಾನಕ್ಕೆ ಬಂದಿತ್ತು.

    ಒಂದೇ ದಿನ 3211 ವರದಿ!: ಉಡುಪಿ ಜಿಲ್ಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮಾತ್ರ ಕರೊನಾ ಟೆಸ್ಟ್ ಲ್ಯಾಬ್ ಇರುವುದು ಜಿಲ್ಲೆಗೆ ಹಿನ್ನಡೆಯಾಗಿತ್ತು. ಮಂಗಳೂರು ಸಹಿತ ಇತರೆಡೆ ಗಂಟಲು ದ್ರವ ಮಾದರಿ ಕಳುಹಿಸಿದ್ದರೂ ವರದಿ ಸಿಗದೆ ಫಲಿತಾಂಶ ವಿಳಂಬವಾಗಿತ್ತು. ಆದರೆ ಈಗ ದೊಡ್ಡ ಮಟ್ಟದಲ್ಲಿ ಪರೀಕ್ಷೆಗೆ ವ್ಯವಸ್ಥೆಯಾಗಿದ್ದು, ಗುರುವಾರ ಒಂದೇ ದಿನ 3211 ವರದಿ ಬಂದಿದೆ. ಇದರಲ್ಲಿ 3,119 ನೆಗೆಟಿವ್, 92 ಪಾಸಿಟಿವ್. ಇನ್ನು 1732 ಮಂದಿಯ ವರದಿ ಬರಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts