ಸನಾತನ ಧರ್ಮವನ್ನು ಏಡ್ಸ್, ಕುಷ್ಠರೋಗಕ್ಕೆ ಹೋಲಿಸಿದ ಡಿಎಂಕೆಯ ಎ ರಾಜಾ

araja
Published on

- ಯಾರನ್ನಾದರೂ ಕರೆತನ್ನಿ, ನಾನು ಸನಾತನ ಧರ್ಮದ ಬಗ್ಗೆ ಚರ್ಚೆಗೆ ಸಿದ್ಧ

ಚೆನ್ನೈ: ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಸಿಎಂ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ವಿವಾದದ ಬೆನ್ನಲ್ಲೇ ಇದೀಗ ಡಿಎಂಕೆ ಇನ್ನೊಬ್ಬ ನಾಯಕ ಎ. ರಾಜಾ ಅವರು ಸನಾತನ ಧರ್ಮವನ್ನು ಏಡ್ಸ್ ಮತ್ತು ಕುಷ್ಠರೋಗಕ್ಕೆ ಹೋಲಿಕೆ ಮಾಡಿದ್ದಾರೆ.

ಎ ರಾಜಾ  ಚೆನ್ನೈನಲ್ಲಿ ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಸನಾತನ ಧರ್ಮದ ಕುರಿತು ಉದಯನಿಧಿ ಅವರು ಆಡಿರುವ ಮಾತುಗಳು ಬಹಳ ಸೌಮ್ಯವಾದವು. ಅವರು ಮೃದು ಧೋರಣೆ ತೋರಿದ್ದಾರೆ. ಸನಾತನ ಮತ್ತು ವಿಶ್ವಕರ್ಮ ಯೋಜನೆಗಳು ಬೇರೆ ಬೇರೆ ಅಲ್ಲ. ಮಲೇರಿಯಾ ಮತ್ತು ಡೆಂಗ್ಯೂ ರೀತಿಯಲ್ಲಿ ಸಂತಾನ ಧರ್ಮವನ್ನು ತೊಡೆದುಹಾಕಬೇಕು ಎಂದು ಉದಯನಿಧಿ ಬಹಳ ಸೌಮ್ಯವಾಗಿ ಹೇಳಿದ್ದಾರೆ ಎಂದಿದ್ದಾರೆ.

ಡೆಂಗ್ಯೂ ಮತ್ತು ಮಲೇರಿಯಾ ಈ ರೋಗಗಳು ಸಾಮಾಜಿಕ ಕಳಂಕವನ್ನು ಹೊಂದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಎಚ್‌ಐವಿ ಮತ್ತು ಕುಷ್ಠರೋಗವನ್ನು ಅಸಹ್ಯಕರವಾಗಿ ನೋಡಲಾಯಿತು. ಆದ್ದರಿಂದ, ನಾವು ಸನಾತನ ಧರ್ಮವನ್ನು ಎಚ್‌ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ದುರವಸ್ಥೆಗಳಿಂದ ಕೂಡಿದ ಕಾಯಿಲೆಗಳಾಗಿ ನೋಡಬೇಕಾಗಿದೆ ಎಂದು ಹೇಳಿದ್ದಾರೆ.

ಯಾರನ್ನಾದರೂ ಕರೆತನ್ನಿ, ನಾನು ಸನಾತನ ಧರ್ಮದ ಬಗ್ಗೆ ಚರ್ಚೆಗೆ ಸಿದ್ಧನಾಗಿದ್ದೇನೆ.10 ಲಕ್ಷ ಅಥವಾ 1 ಕೋಟಿಯಾದರೂ ಪರವಾಗಿಲ್ಲ, ಅವರು ಯಾವುದೇ ರೀತಿಯ ಆಯುಧಗಳನ್ನು ಆದರು ತರಲಿ ನಾನು ಬರುತ್ತೇನೆ. ದೆಹಲಿಯಲ್ಲಿ ಪೆರಿಯಾರ್ ಮತ್ತು ಅಂಬೇಡ್ಕರ್ ಪುಸ್ತಕಗಳೊಂದಿಗೆ ಚರ್ಚೆ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಪ್ರಧಾನಿ ಸಭೆ ಕರೆದರೆ ಮತ್ತು ಅವರು ನನಗೆ ಅನುಮತಿ ನೀಡಿದರೆ ಎಲ್ಲಾ ಕ್ಯಾಬಿನೆಟ್ ಮಂತ್ರಿಗಳಿಗೆ ಉತ್ತರವನ್ನು ನೀಡಲು ನಾನು ಸಿದ್ಧನಿದ್ದೇನೆ. ಸನಾತನ ಧರ್ಮ ಯಾವುದು ಎಂಬುದನ್ನು ನೀವು ನಿರ್ಧರಿಸಿದ ನಂತರ ನಾನು ವಿವರಿಸುತ್ತೇನೆಂದು ಹೇಳಿದ್ದಾರೆ.

ಏನಿದು ವಿವಾದ?: ಸಮಾವೇಶವೊಂದರಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು. ಈ ಪರಿಕಲ್ಪನೆಯು ಅಂತರ್ಗತವಾಗಿ ಹಿಂದುಳಿದಿದೆ. ಇದು ಜಾತಿ ಮತ್ತು ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ಮೂಲಭೂತವಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತದೆ ಎಂದು ಹೇಳಿದ್ದರು. ಈ ಹೇಳಿಕೆ ನಂತರ ವಿವಾದ ಭುಗಿಲೆದ್ದಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಪುತ್ರ ಉದಯನಿಧಿ ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೆರಿಯಾ ರೋಗಗಳಿಗೆ ಹೋಲಿಸಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದರು. ಹಲವು ಮುಖಂಡರು ಮತ್ತು ರಾಜಕೀಯ ಪಕ್ಷಗಳು ಹೇಳಿಕೆಯನ್ನು ಖಂಡಿಸಿದ್ದವು. ಉದಯನಿಧಿಯನ್ನು ಚಪ್ಪಲಿಯಲ್ಲಿಯಲ್ಲಿ ಹೊಡೆಯುವವರಿಗೆ 10 ಲಕ್ಷ ಬಹುಮಾನ ಕೊಡುವುದಾಗಿ ಘೋಷಿಸಿರುವ ಬ್ಯಾನರ್​ಗಳು ಹಲವು ಭಾಗಗಳಲ್ಲಿ ಕಂಡುಬಂದಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net