ಇಂದಿನಿಂದ ಭವಿಷ್ಯದ ತಾರೆಯರ ಸೆಣಸಾಟ; ಆರನೇ ಪ್ರಶಸ್ತಿ ಕನಸಿನಲ್ಲಿ ಭಾರತದ ಕಿರಿಯರು

u19 wc web
Published on

ಬ್ಲೋಮ್​ಫಾಂಟೇನ್​: ಟೀಮ್​ ಇಂಡಿಯಾ ಮಾಜಿ ಆಲ್ರೌಂಡರ್​ ಯುವರಾಜ್​ ಸಿಂಗ್​, ಸ್ಟಾರ್​ ಆಟಗಾರರಾದ ವಿರಾಟ್​ ಕೊಹ್ಲಿ, ರವೀಂದ್ರ ಜಡೇಜಾ, ರೋಹಿತ್​ ಶರ್ಮ, ರಿಷಭ್​ ಪಂತ್​, ಶುಭಮಾನ್​ ಗಿಲ್​ರಂಥ ಯುವ ಕ್ರಿಕೆಟಿಗರ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿದ್ದ ಐಸಿಸಿ 19 ವಯೋಮಿತಿಯ ಏಕದಿನ ವಿಶ್ವಕಪ್​ ಟೂರ್ನಿಯ 15ನೇ ಆವೃತ್ತಿಗೆ ಶುಕ್ರವಾರ ಹರಿಣಗಳ ನಾಡಿನಲ್ಲಿ ಚಾಲನೆ ದೊರೆಯಲಿದೆೆ. 6ನೇ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸುವ ಹಂಬಲದಲ್ಲಿರುವ ಭಾರತ ತಂಡ ಹಾಲಿ ಚಾಂಪಿಯನ್​ ಆಗಿ ಕಣಕ್ಕಿಳಿಯಲಿದ್ದು, ಪ್ರಶಸ್ತಿ ಫೇವರಿಟ್​ ಎನಿಸಿದೆ.

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ದಣ ಆಫ್ರಿಕಾ&ವೆಸ್ಟ್​ ಇಂಡೀಸ್​ ತಂಡಗಳು ಎದುರಾಗಲಿವೆ. ದಿನದ ಇನ್ನೊಂದು ಪಂದ್ಯದಲ್ಲಿ ಐರ್ಲೆಂಡ್​&ಅಮೆರಿಕ ಸೆಣಸಾಡಲಿವೆ. ಐದು ಬಾರಿಯ ಚಾಂಪಿಯನ್​ (2000, 2008, 2012, 2018, 2022) ಭಾರತ ತಂಡ ಶನಿವಾರ ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. 2ನೇ ಯಶಸ್ವಿ ತಂಡ ಎನಿಸಿರುವ ಆಸ್ಟ್ರೆಲಿಯಾ (1988, 2002, 2010) ಮೂರು ಬಾರಿ ಪ್ರಶಸ್ತಿ ಗೆದ್ದಿದೆ. ಪಾಕಿಸ್ತಾನ (2004, 2006) 2 ಬಾರಿ, ಬಾಂಗ್ಲಾದೇಶ (2020). ದ.ಆಫ್ರಿಕಾ (2014), ವೆಸ್ಟ್​ ಇಂಡೀಸ್​ (2016) ಹಾಗೂ ಇಂಗ್ಲೆಂಡ್​ (1988) ಒಮ್ಮೆ ಚಾಂಪಿಯನ್​ ಎನಿಸಿವೆ. ಕರೋನಾದಿಂದಾಗಿ ಕಳೆದ ಬಾರಿಯ ಟೂರ್ನಿಯಿಂದ ಹಿಂದೆ ಸರಿದಿದ್ದ ನ್ಯೂಜಿಲೆಂಡ್​ ಪುನರಾಗಮನ ಮಾಡಿದೆ.

ಟೂರ್ನಿ ಸ್ವರೂಪ

ಟೂರ್ನಿಯಲ್ಲಿ ಆಡಲಿರುವ 16 ತಂಡಗಳನ್ನು ತಲಾ 4ರಂತೆ 4 ಗುಂಪುಗಳಾಗಿ ವಿಭಾಗಿಸಲಾಗಿದ್ದು, ಎಲ್ಲ ತಂಡಗಳು ಲೀಗ್​ನಲ್ಲಿ 3 ಪಂದ್ಯ ಆಡಲಿವೆ. ಪ್ರತಿ ಗುಂಪಿನ ಅಗ್ರ 3 ತಂಡಗಳು 2ನೇ ಸುತ್ತಿಗೇರಲಿವೆ. ಸೂಪರ್​-6ನಲ್ಲಿ ತಲಾ ಆರು ತಂಡಗಳು 2 ಗುಂಪಾಗಿ ವಿಭಜನೆಗೊಳ್ಳಲಿವೆ. ಇಲ್ಲಿಂದ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್​ಗೇರಲಿವೆ. ಫೆ. 6, 8ರಂದು ಸೆಮಿಫೈನಲ್ಸ್​ ಮತ್ತು ಫೆ. 11ರಂದು ಫೈನಲ್​ ನಡೆಯಲಿದೆ.

ಗುಂಪುಗಳು

ಎ: ಭಾರತ, ಬಾಂಗ್ಲಾದೇಶ, ಐರ್ಲೆಂಡ್​, ಅಮೆರಿಕ.

ಬಿ: ಇಂಗ್ಲೆಂಡ್​, ದ.ಆಫ್ರಿಕಾ, ವೆಸ್ಟ್​ ಇಂಡೀಸ್​, ಸ್ಕಾಟ್ಲೆಂಡ್​.

ಸಿ: ಆಸ್ಟ್ರೆಲಿಯಾ, ಶ್ರೀಲಂಕಾ, ಜಿಂಬಾಬ್ವೆ, ನಮೀಬಿಯಾ.

ಡಿ: ಅಫ್ಘಾನಿಸ್ತಾನ, ಪಾಕಿಸ್ತಾನ, ನ್ಯೂಜಿಲೆಂಡ್​, ನೇಪಾಳ.

ಸೂಪರ್​-6 ಗುಂಪು

ಗುಂಪು-1: ಎ1, ಎ2, ಎ3, ಡಿ1, ಡಿ2, ಡಿ3.

ಗುಂಪು-2: ಬಿ1, ಬಿ2, ಬಿ3, ಸಿ1, ಸಿ2, ಸಿ3.

ಭಾರತದ ಪಂದ್ಯಗಳು

ದಿನಾಂಕ ಎದುರಾಳಿ

ಜ.20 ಬಾಂಗ್ಲಾದೇಶ

ಜ.25 ಐರ್ಲೆಂಡ್​

ಜ.28 ಅಮೆರಿಕ

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ತಂಡಗಳು: 16

ಒಟ್ಟು ಪಂದ್ಯ: 41

ತಾಣಗಳು: 5

ಏಕೈಕ ಕನ್ನಡಿಗ

ಟೂರ್ನಿಗೆ ಆಯ್ಕೆಯಾಗಿರುವ ಭಾರತ ಕಿರಿಯರ ತಂಡದಲ್ಲಿ ಕರ್ನಾಟಕದ ವೇಗಿ ಧನುಷ್​ ಗೌಡ ಏಕೈಕ ಕನ್ನಡಿಗ ಎನಿಸಿದ್ದಾರೆ. ಪಂಜಾಬ್​ ಮೂಲದ ಬ್ಯಾಟರ್​ ಉದಯ್​ ಸಹರಾನ್​ ತಂಡ ಮುನ್ನಡೆಸಲಿದ್ದಾರೆ.

ಭಾರತ ತಂಡ: ಉದಯ್​ ಸಹರಾನ್​ (ನಾಯಕ), ಅರ್ಶಿನ್​ ಕುಲಕರ್ಣಿ, ಆದರ್ಶ್​ ಸಿಂಗ್​, ರುದ್ರ ಮಯೂರ್​ ಪಟೇಲ್​, ಸಚಿನ್​ ದಾಸ್​, ಪ್ರಿಯಾಂಶು ಎಂ., ಮುಶೀರ್​ ಖಾನ್​, ಎ.ಅವಿನಾಶ್​ ರಾವ್​, ಸೌಮಿ ಕುಮಾರ್​ ಪಾಂಡೆ, ಎಂ. ಅಭಿಷೇಕ್​, ಇನ್ನೆಶ್​ ಮಹಾಜನ್​, ಧನುಷ್​ ಗೌಡ, ಆರಾಧ್ಯ ಶುಕ್ಲಾ, ರಾಜ್​ ಲಿಂಬಾನಿ, ನಮನ್​ ತಿವಾರಿ.

ಶ್ರೀಲಂಕಾದಿಂದ ಸ್ಥಳಾಂತರ

ಐಸಿಸಿಯಿಂದ ಅಮಾನತುಗೊಂಡಿರುವ ಶ್ರೀಲಂಕಾ ಟೂರ್ನಿಯ ಆತಿಥ್ಯವನ್ನು ಕಳೆದುಕೊಂಡಿತು. ಇದರೊಂದಿಗೆ ದಣ ಆಫ್ರಿಕಾಕ್ಕೆ ಎರಡನೇ ಬಾರಿಗೆ ಟೂರ್ನಿಯ ಆತಿಥ್ಯ ಒಲಿಯಿತು. 2020ರಲ್ಲಿ ಮೊದಲ ಬಾರಿಗೆ ಆತಿಥ್ಯ ವಹಿಸಿದಾಗ ಬಾಂಗ್ಲಾದೇಶ ಚಾಂಪಿಯನ್​ ಆಗಿತ್ತು. ಸರ್ಕಾರದ ಹಸ್ತಕ್ಷೇಪದಿಂದಾಗಿ ಶ್ರೀಲಂಕಾ ಕ್ರಿಕೆಟ್​ ಮಂಡಳಿಯನ್ನು ಐಸಿಸಿ ಅಮಾನುತುಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net