5 ಕೆಜಿ ಚಿನ್ನಾಭರಣದೊಂದಿಗೆ ಕೆಲಸಗಾರಿಬ್ಬರು ಪರಾರಿ! ಡೆಲಿವರಿ ಕೊಡದೆ ವಂಚನೆ, ಮಾಲೀಕ ಕಂಗಾಲು

GOLD
Published on

ವಿಜಯಪುರ: 2 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ಡೆಲಿವರಿ ಕೊಡದೆ ಮಾಲೀಕನಿಗೆ ಕೆಲಸಗಾರರೇ ಮೋಸ ಮಾಡಿದ್ದಾರೆ!

ಇಂತಹ ಘಟನೆ ವಿಜಯಪುರದಲ್ಲಿ ನಡೆದಿದೆ. ರಾಮ ಮಂದಿರ ರಸ್ತೆಯ ಬಾಲಾಜಿ ಮಂದಿರ ಸಮೀಪದ ಕಾವ್ಯಾ ಜುವೆಲರ್ಸ್​ ಅಂಗಡಿ ಮಾಲೀಕ ಪರೇಶ ಗಜರಾಜ ಜೈನ್‌ ಎಂಬುವರಿಗೆ ಕೆಲಸಗಾರರೇ ನಂಬಿಕೆ ದ್ರೋಹ ಎಸಗಿದ್ದು, ಮಾಲೀಕರೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಂಬೈ ಮೂಲದ ಜಗದೀಶ ಕಾಂತಿಲಾಲ ಗೇಮಾವತ ಹಾಗೂ ಉತ್ತರ ಪ್ರದೇಶ ಮೂಲಲ ಧರ್ಮೇಂದ್ರ ರಾಜಕುಮಾರ ಗೌರ ಎಂಬುವವರು ಸುಮಾರು 5 ಕೆಜಿ ಚಿನ್ನದೊಂದಿದೆ ಪರಾರಿಯಾಗಿದ್ದಾರೆ.

ಪ್ರಕರಣದ ವಿವರ: ಕಾವ್ಯಾ ಜುವೆಲರ್ಸ್​ನಲ್ಲಿ ಜಗದೀಶ ಕಾಂತಿಲಾಲ ಗೇಮಾವತ ಹಾಗೂ ಧರ್ಮೇಂದ್ರ ರಾಜಕುಮಾರ ಗೌರ ಕೆಲಸ ಮಾಡುತ್ತಿದ್ದರು. ನ.13ರಂದು ಹುಬ್ಬಳ್ಳಿ, ರಾಮದುರ್ಗ, ಸವದತ್ತಿ, ಮುಧೋಳ, ಜಮಖಂಡಿಯ ಅಂಗಡಿಗಳಿಗೆ ಬಂಗಾರದ ಆಭರಣಗಳನ್ನು ಡೆಲಿವರಿ ಕೊಡಬೇಕಿತ್ತು. ಅದಕ್ಕಾಗಿ ನ.12ರ ರಾತ್ರಿ 9ರ ಸುಮಾರಿಗೆ ಸೇಲ್ಸ್‌ ಮ್ಯಾನ್‌ ಧರ್ಮೇಂದ್ರನಿಗೆ 2,10,71,266 ರೂ. ಮೌಲ್ಯದ 4969.4 ಗ್ರಾಂ ಬಂಗಾರದ ಆಭರಣಗಳನ್ನು ಕೊಟ್ಟು ಹುಬ್ಬಳ್ಳಿ, ರಾಮದುರ್ಗ, ಸವದತ್ತಿ, ಮುಧೋಳ, ಜಮಖಂಡಿಯ ಅಂಗಡಿಗಳಿಗೆ ಡೆಲಿವರಿ ಕೊಡುವಂತೆ ಮಾಲೀಕರು ಕಳುಹಿಸಿದ್ದರು. ಆದರೆ, ಜಗದೀಶ ಮತ್ತು ಧರ್ಮೇಂದ್ರ ಇಬ್ಬರೂ ಜತೆಯಾಗಿ ರಿಟೇಲ್‌ ಅಂಗಡಿಗಳಿಗೆ ಡೆಲಿವರಿ ಕೊಡದೆ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ.

ಪ್ರಕರಣ ಕುರಿತು ವಿಜಯವಾಣಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ಅಧೀಕ್ಷಕ ಎಚ್‌.ಡಿ. ಆನಂದಕುಮಾರ, ಈ ಬಗ್ಗೆ ಗಾಂಧಿ ಚೌಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಚುರುಕುಗೊಳಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net