

ಮಂಗಳೂರು: ನಗರದ ಕೊಡಿಯಾಲಬೈಲ್ನಲ್ಲಿರುವ ಜಿಲ್ಲಾ ಕಾರಾಗೃಹದೊಳಗೆ ಇಬ್ಬರು ವಿಚಾರಣಾಧೀನ ಕೈದಿಗಳು ಎಂಡಿಎಂಎ ಡ್ರಗ್ಸ್ ಸಾಗಾಟ ಮಾಡಲು ಯತ್ನಿಸಿರುವುದನ್ನು ಮಂಗಳವಾರ ಭದ್ರತಾ ಸಿಬಂದಿ ಪತ್ತೆ ಮಾಡಿದ್ದಾರೆ.
ವಿಚಾಣಾಧೀನ ಕೈದಿಗಳಾದ ವಿಕ್ರಂ ಕುಮಾರ ಮತ್ತು ಪ್ರಮೋದನನ್ನು ಮಂಗಳವಾರದಂದು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಸ್ ಕಾರಾಗೃಹಕ್ಕೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ ಕಾರಾಗೃಹದ ಮುಖ್ಯದ್ವಾರದಲ್ಲಿ ಕೆಎಸ್ಐಎಸ್ಎಫ್ ಸಿಬಂದಿ ಕೈದಿಗಳನ್ನು ತಪಾಸಣೆ ನಡೆಸಿದರು. ಆಗ ವಿಕ್ರಂ ಕುಮಾರ್ ಧರಿಸಿದ್ದ ಚಪ್ಪಲಿಯಲ್ಲಿ ಹಳದಿ ಬಣ್ಣದ ಗಮ್ಟೇಪ್ನಿಂದ ಸುತ್ತಿದ ಎರಡು ಅನುಮಾನಸ್ಪದ ಪೊಟ್ಟಣಗಳು ಕಂಡುಬಂದವು. ಈ ಬಗ್ಗೆ ವಿಚಾರಣೆ ನಡೆಸಿದಾಗ ತಾನು ಧರಿಸಿದ್ದ ಚಪ್ಪಲಿ ಸಹ ಕೈದಿ ಪ್ರಮೋದನಿಗೆ ಸೇರಿದ್ದಾಗಿದೆ. ನ್ಯಾಯಾಲಯದಿಂದ ಕಾರಾಗೃಹಕ್ಕೆ ವಾಪಸ್ಸಾಗುವಾಗ ಬದಲಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ. ಈ ಬಗ್ಗೆ ಪ್ರಮೋದನನ್ನು ವಿಚಾರಿಸಿದಾಗ ನ್ಯಾಯಾಲಯಕ್ಕೆ ವಿಚಾರಣೆಗೆ ಹೋಗುವಾಗ ಹಿಂದೆ ತನ್ನೊಂದಿಗೆ ಕೇಸೊಂದರಲ್ಲಿದ್ದ ದಾವಣಗೆರೆಯ ಮಂಜುನಾಥ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವ ಸಮಯದಲ್ಲಿ ನ್ಯಾಯಾಲಯದ ಆವರಣದಲ್ಲಿದ್ದ ಶೌಚಾಲಯದ ಬಕೆಟ್ನ ತಳಭಾಗದಲ್ಲಿ 2 ಪೊಟ್ಟಣ ಬಚ್ಚಿಟ್ಟಿರುವುದಾಗಿ ತಿಳಿಸಿದ್ದ. ಅದರಂತೆ ಅವುಗಳನ್ನು ತೆಗೆದು ಚಪ್ಪಲಿಯಲ್ಲಿಟ್ಟುಕೊಂಡು ಬಂದಿದ್ದೆ. ಕಾರಾಗೃಹ ಪರವೇಶಿಸುವಾಗ ಚಪ್ಪಲಿ ಬದಲಿಸಿಕೊಂಡಿದ್ದೆವು ಎಂದು ತಿಳಿಸಿದ್ದಾನೆ.
10 ಪೊಟ್ಟಣಗಳು ಪತ್ತೆ
ಗಮ್ಟೇಪ್ನಿಂದ ಸುತ್ತಿದ 2 ಪೊಟ್ಟಣಗಳನ್ನು ಪರಿಶೀಲಿಸಿದಾಗ ಅದರಲ್ಲಿ ಸಣ್ಣ ಸಣ್ಣ ಬಿಳಿ ಬಣ್ಣದ 10 ಪೊಟ್ಟಣಗಳಿದ್ದವು. ಅದರಲ್ಲಿ ಎಂಡಿಎಂಎ ಡ್ರಗ್ಸ್ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.