

ಶಾಂಘೈ: ಬ್ಯಾಡ್ಮಿಂಟನ್ ಇತಿಹಾಸ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿದ ‘ಸೂಪರ್ ಡ್ಯಾನ್’ ಖ್ಯಾತಿಯ ಚೀನಾದ ಲಿನ್ ಡ್ಯಾನ್ ಶನಿವಾರ ವಿದಾಯ ಪ್ರಕಟಿಸಿದ್ದಾರೆ. 2 ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ 36 ವರ್ಷದ ಲಿನ್ ಡ್ಯಾನ್, ಮುಂದಿನ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಕನಸು ಕೈಬಿಟ್ಟು ಈ ನಿರ್ಧಾರ ಕೈಗೊಂಡಿದ್ದಾರೆ.
ಎಡಗೈ ಆಟಗಾರ ಲಿನ್ ಡ್ಯಾನ್ ವೃತ್ತಿಜೀವನದಲ್ಲಿ ದಶಕದ ಕಾಲ ಪ್ರಮುಖ ಎದುರಾಳಿ ಎನಿಸಿದ್ದ ಮಲೇಷ್ಯಾದ ಲೀ ಚಾಂಗ್ ವೀ ನಿವೃತ್ತಿಯಾದ ವರ್ಷದೊಳಗೆ ಲಿನ್ ಡ್ಯಾನ್ ಕೂಡ ರ‌್ಯಾಕೆಟ್ ಕೆಳಗಿಟ್ಟಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಇತ್ತೀಚೆಗಿನ ವರ್ಷಗಳಲ್ಲಿ ಅವರ ಫಾರ್ಮ್ ಕಳೆಗುಂದಿತ್ತು. ಕೆಲ ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.
ಯುವ ಷಟ್ಲರ್ ಆಗಿದ್ದಾಗಿನಿಂದಲೇ ಲಿನ್ ಡ್ಯಾನ್ ‘ಬ್ಯಾಡ್ ಬಾಯ್’ ಆಗಿಯೂ ಗುರುತಿಸಿಕೊಂಡಿದ್ದರು. ಇದರ ನಡುವೆಯೂ ಅವರು 28 ವಯಸ್ಸಿನಲ್ಲೇ ಎಲ್ಲ ಪ್ರಮುಖ 9 ಬ್ಯಾಡ್ಮಿಂಟನ್ ಪ್ರಶಸ್ತಿಗಳನ್ನು (ಒಲಿಂಪಿಕ್ಸ್, ವಿಶ್ವ ಚಾಂಪಿಯನ್‌ಷಿಪ್, ಥಾಮಸ್ ಕಪ್, ವಿಶ್ವಕಪ್, ಸುಧೀರ್‌ಮನ್ ಕಪ್, ಸೂಪರ್ ಸಿರೀಸ್ ಮಾಸ್ಟರ್ಸ್ ಫೈನಲ್ಸ್, ಆಲ್ ಇಂಗ್ಲೆಂಡ್, ಏಷ್ಯನ್ ಗೇಮ್ಸ್, ಏಷ್ಯನ್ ಚಾಂಪಿಯನ್‌ಷಿಪ್) ಜಯಿಸುವ ಮೂಲಕ ‘ಸೂಪರ್ ಗ್ರಾಂಡ್ ಸ್ಲಾಂ’ ಸಾಧಿಸಿದ್ದರು. ಸಿಂಗಲ್ಸ್ ವೃತ್ತಿಜೀವನದಲ್ಲಿ 666 ಗೆಲುವು, 128 ಸೋಲು ಕಂಡಿರುವ ಮಾಜಿ ವಿಶ್ವ ನಂ. 1 ಡ್ಯಾನ್, 66 ಪ್ರಶಸ್ತಿ ಜಯಿಸಿದ್ದಾರೆ. ಒಲಿಂಪಿಕ್ಸ್ ಸಿಂಗಲ್ಸ್‌ನಲ್ಲಿ ಸತತ 2 ಸ್ವರ್ಣ ಜಯಿಸಿದ ಏಕೈಕ ಷಟ್ಲರ್ ಆಗಿದ್ದಾರೆ.
‘ನಾನು ಇಷ್ಟಪಡುವ ಕ್ರೀಡೆಗೆ ಎಲ್ಲವನ್ನೂ ಅರ್ಪಿಸಿದ್ದೇನೆ. ನನ್ನ ಕುಟುಂಬ, ಕೋಚ್, ಸಹ-ಆಟಗಾರರು ಮತ್ತು ಅಭಿಮಾನಿಗಳು ಹಲವು ಗೆಲುವುಗಳು ಮತ್ತು ಕಷ್ಟದ ದಿನಗಳಲ್ಲಿ ಜತೆಗಿದ್ದರು’ ಎಂದು ಡ್ಯಾನ್ ತಿಳಿಸಿದ್ದಾರೆ. ಮಾಜಿ ವಿಶ್ವ ನಂ. 1 ಲೀ ಚಾಂಗ್ ವೀ, ಡ್ಯಾನ್‌ರನ್ನು ತಮ್ಮ ವೃತ್ತಜೀವನದ ಶ್ರೇಷ್ಠ ಎದುರಾಳಿ ಎಂದು ಬಣ್ಣಿಸಿದ್ದಾರೆ. ಲೀ ಚಾಂಗ್ ವೀ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಡ್ಯಾನ್‌ಗೆ ಸೆಮೀಸ್‌ನಲ್ಲಿ ಸೋಲುಣಿಸಿ ಹ್ಯಾಟ್ರಿಕ್ ಸ್ವರ್ಣ ಸಾಧನೆಯ ಅವಕಾಶ ತಪ್ಪಿಸಿದ್ದರು.
ಪತ್ನಿಯೂ ವಿಶ್ವ ಚಾಂಪಿಯನ್ ಷಟ್ಲರ್
ಲಿನ್ ಡ್ಯಾನ್ ಅವರ ಪತ್ನಿ ಕ್ಸಿ ಕ್ಸಿಂಗ್‌ಾಂಗ್ ಕೂಡ ಮಾಜಿ ವಿಶ್ವ ಚಾಂಪಿಯನ್ ಆಟಗಾರ್ತಿ. ಡ್ಯಾನ್‌ಗಿಂತ 3 ವರ್ಷ ಹಿರಿಯರಾದ ಕ್ಸಿ ಕೂಡ ಹಲವು ಪದಕಗಳನ್ನು ಜಯಿಸಿದ್ದಾರೆ. 2006ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಇಬ್ಬರೂ ಸ್ವರ್ಣ ಜಯಿಸಿದ್ದರು. 7 ವರ್ಷಗಳ ಡೇಟಿಂಗ್ ಬಳಿಕ 2010ರಲ್ಲಿ ಇವರಿಬ್ಬರು ವಿವಾಹವಾಗಿದ್ದರು. ಆದರೆ 2016ರಲ್ಲಿ ಕ್ಸಿ ಗರ್ಭಿಣಿಯಾಗಿದ್ದ ಸಮಯದಲ್ಲಿ ಡ್ಯಾನ್ ವಿವಾಹೇತರ ಸಂಬಂಧ ಬಹಿರಂಗಗೊಂಡು ವಿವಾದಕ್ಕೀಡಾಗಿದ್ದರು. ಚೀನಾದ ನಟಿಯೊಬ್ಬಳ ಜತೆ ಡ್ಯಾನ್ ಹೋಟೆಲ್ ಕೋಣೆಯಲ್ಲಿ ಸಲಿಗೆಯಿಂದ ಇದ್ದ ಚಿತ್ರ ಆನ್‌ಲೈನ್‌ನಲ್ಲಿ ಸೋರಿಕೆಯಾಗಿತ್ತು. ಈ ಬಗ್ಗೆ ಅವರು ಬಳಿಕ ಕ್ಷಮೆಯಾಚಿಸಿದ್ದರು.
ಲಿನ್ ಡ್ಯಾನ್ ಪದಕ ಸಾಧನೆ
ಒಲಿಂಪಿಕ್ಸ್: ಚಿನ್ನ: 2 (2008, 20012).
ವಿಶ್ವ ಚಾಂಪಿಯನ್‌ಷಿಪ್: 5 ಚಿನ್ನ, 2 ಬೆಳ್ಳಿ.
ಸುಧೀರ್‌ಮನ್ ಕಪ್: 5 ಚಿನ್ನ, 1 ಬೆಳ್ಳಿ.
ಥಾಮಸ್ ಕಪ್: 6 ಚಿನ್ನ, 2 ಕಂಚು.
ಏಷ್ಯನ್ ಗೇಮ್ಸ್: 5 ಚಿನ್ನ, 2 ಬೆಳ್ಳಿ, 1 ಕಂಚು.
ಏಷ್ಯನ್ ಚಾಂಪಿಯನ್‌ಷಿಪ್: 4 ಚಿನ್ನ, 2 ಬೆಳ್ಳಿ, 3 ಕಂಚು.
ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್: 6 ಚಿನ್ನ, 4 ಬೆಳ್ಳಿ.