

ಬೆಂಗಳೂರು: ಶಿಕ್ಷಕರ ದಿನದಂದೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಮುಖ್ಯ ಪರೀಕ್ಷೆಯಲ್ಲಿ ಫೇಲ್ ಆದರೂ ಇನ್ನು ಮುಂದೆ ಚಿಂತಿಸಬೇಕಿಲ್ಲ. ಒಂದಲ್ಲ ಎರಡು ಅವಕಾಶಗಳನ್ನು ಶಿಕ್ಷಣ ಇಲಾಖೆ ನೀಡಲಿದೆ. ಅಂದರೆ, ಎರಡು ಬಾರಿ ಪೂರಕ ಪರೀಕ್ಷೆಯನ್ನು ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ.
ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಧು ಬಂಗಾರಪ್ಪ, ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭವನ್ನು ಕೋರುತ್ತೇನೆ. ಇಂದು ಒಟ್ಟು 41 ಶಿಕ್ಷಕರಿಗೆ ಪ್ರಶಸ್ತಿ ಕೊಡ್ತಿದ್ದೇವೆ ಎಂದು ಹೇಳಿದರು.
ಮಾತು ಮುಂದುವರಿಸಿದ ಸಚಿವರು, ಈ ಮುಂಚೆ ಮಕ್ಕಳಿಗೆ ವಾರಕ್ಕೆ 1 ಮೊಟ್ಟೆ ಕೊಡಲಾಗುತ್ತಿತ್ತು. 8,9 ಮತ್ತು 10ನೇ ತರಗತಿ ಮಕ್ಕಳಿಗೆ ಮೊಟ್ಟೆ ಕೊಡುತ್ತಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ 1 ರಿಂದ 10ನೇ ತರಗತಿ ಮಕ್ಕಳಿಗೆ ವಾರಕ್ಕೆ 2 ಮೊಟ್ಟೆ ಕೊಡ್ತಿದ್ದೇವೆ. 58 ಸಾವಿರ ಶಾಲೆಗಳಲ್ಲಿ 280 ಕೋಟಿ ರೂ. ವೆಚ್ಚದಲ್ಲಿ ಮೊಟ್ಟೆ ಕೊಡ್ತಿದ್ದೇವೆ ಎಂದು ತಿಳಿಸಿದರು.
ಶಿಕ್ಷಕರ ವರ್ಗಾವಣೆ ವಿಚಾರದಲ್ಲೂ ಸಾಕಷ್ಟು ಗೊಂದಲ ಇತ್ತು. 32 ಸಾವಿರ ಶಿಕ್ಷಕರು ಸ್ವಂತ ಇಚ್ಛೆಯಿಂದ ವರ್ಗಾವಣೆ ತೆಗೆದುಕೊಂಡಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ 10 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೇವೆ. ಕರೊನಾ ನಂತರ ಕಲಿಕಾ ಚೇತರಿಕೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಮಕ್ಕಳು ಹಾಗೂ ಪಾಲಕರ ಒತ್ತಡ ಕಡಿಮೆ ಮಾಡಲು ಒಂದೇ ವರ್ಷದಲ್ಲಿ 3 ಸಲ ಪರೀಕ್ಷೆಗೆ ಅವಕಾಶ ಕೊಡುತ್ತಿದ್ದೇವೆ. ಈ ವರ್ಷದಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ವರ್ಷಕ್ಕೆ 3 ಪರೀಕ್ಷೆಗೆ ಚಾಲನೆ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯ ಶಿಕ್ಷಣ ನೀತಿಯನ್ನು ತರುತ್ತಿದ್ದೇವೆ. ಮಕ್ಕಳು ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಕಡ್ಡಾಯವಾಗಿ ಓದಬೇಕೆಂಬ ಕಾರ್ಯಕ್ರಮಕ್ಕೆ 15ನೇ ತಾರೀಖಿನಂದು ಚಾಲನೆ ಕೊಡ್ತಿದ್ದೇವೆ. ಮಕ್ಕಳನ್ನು ಭವಿಷ್ಯದ ಉತ್ತಮ ಪ್ರಜೆಯಾಗಿಸಲು, ಒಳ್ಳೆಯ ವಿದ್ಯಾಭ್ಯಾಸ ಕೊಡಲು ನಾವು ಮುಂದಾಗಿದ್ದೇವೆ ಎಂದು ಮಧು ಬಂಗಾರಪ್ಪ ಹೇಳಿದರು.
ಶಿಕ್ಷಣ ಇಲಾಖೆ ಇತ್ತೀಚಿಗಷ್ಟೇ ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ಪೂರಕ ಪರೀಕ್ಷೆ ಮಾಡಿ ಪ್ರಶಂಸೆ ಗಳಿಸಿತ್ತು. ಇದರ ಬೆನ್ನಲ್ಲೇ ಈಗ SSLC ವಿದ್ಯಾರ್ಥಿಗಳಿಗೂ ಎರಡೆರಡು ಪೂರಕ ಪರೀಕ್ಷೆಗೆ ರೆಡಿಯಾಗಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣ ಆಗುವ ವಿದ್ಯಾರ್ಥಿಗಳಿಗೋಸ್ಕರ ಈ ಅವಕಾಶ ನೀಡಲಾಗುತ್ತಿದೆ. ಅಲ್ಲದೆ, ಮಕ್ಕಳಲ್ಲಿ ಆತ್ಮ ವಿಶ್ವಾಸ ಕೂಡ ಜಾಸ್ತಿ ಆಗುತ್ತದೆ. ಪ್ರಸಕ್ತ ಸಾಲಿನಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಎರಡು ಪೂರಕ ಪರೀಕ್ಷೆಯನ್ನು ಪರಿಚಯಿಸಿ, ಶಿಕ್ಷಣ ಇಲಾಖೆ ಯಶಸ್ಸು ಕಂಡಿದೆ.