

ವಿಜಯವಾಣಿ ಸುದ್ದಿಜಾಲ ಬೈಂದೂರು
ಕಾಲು ಜಾರಿ ಕೆರೆಗೆ ಬಿದ್ದ 9ನೇ ತರಗತಿ ವಿದ್ಯಾರ್ಥಿಗಳಿಬ್ಬರು ಮಂಗಳವಾರ ಸಂಜೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ತಾಲೂಕಿನ ಯಡ್ತರೆ ಗ್ರಾಮದ ಯೋಜನಾ ನಗರ ನಿವಾಸಿ ಕೂಲಿ ಕಾರ್ಮಿಕ ಕೃಷ್ಣ ದೇವಾಡಿಗ ಎಂಬುವರ ಪುತ್ರ ನಾಗೇಂದ್ರ (13) ಹಾಗೂ ಕಟ್ಟಡ ಸಾಮಗ್ರಿ ಪೂರೈಕೆ ಕೆಲಸಗಾರ, ಬೈಂದೂರು ರೈಲ್ವೆ ನಿಲ್ದಾಣದ ಬಳಿಯ ಜಿಎಂ ಕಂಪೌಂಡ್ ನಿವಾಸಿ ಶಾನು ಶಾಲಿಯಾನ್ ಎಂಬುವರ ಪುತ್ರ ಶಾನು ಮೊಹಮದ್ ಶಫಾನ್ (13) ಮೃತರು.
ಬೈಂದೂರು ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿಯಲ್ಲಿ ಇಬ್ಬರೂ ಸಹಪಾಠಿಗಳಾಗಿದ್ದರು. ಮಂಗಳವಾರ ಇಂಗ್ಲಿಷ್ ಪರೀಕ್ಷೆ ಮುಗಿಸಿ ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿದ ಬಳಿಕ ಸಂಜೆ 4 ಗಂಟೆಗೆ ನಾಗೇಂದ್ರ ಶಾನು ಮೊಹಮದ್ ಶಫಾನ್ನ ಮನೆಗೆ ಬಂದ. ಇಬ್ಬರೂ ಬೈಂದೂರು ಸೇನೇಶ್ವರ ದೇವಸ್ಥಾನದ ಹಿಂಬದಿಯ ಕೆರೆಕಟ್ಟೆ ಕೆರೆಯ ಬಳಿಗೆ ಬಂದರು. ಈ ಸಂದರ್ಭ ಕಾಲು ಜಾರಿ ಬಿದ್ದರು ಎನ್ನಲಾಗಿದೆ.
ಇನ್ನೊಂದೆಡೆ, ರಾತ್ರಿಯಾದರೂ ವಿದ್ಯಾರ್ಥಿಗಳು ಮನೆಗೆ ಬರದಿರುವುದನ್ನು ಗಮನಿಸಿದ ಮನೆಮಂದಿ, ಕೆರೆ ಬಳಿ ಹುಡುಕಿದಾಗ ಆ ಪ್ರದೇಶದಲ್ಲಿ ಸೈಕಲ್, ಬಟ್ಟೆ ಹಾಗೂ ಎರಡು ಚಪ್ಪಲಿಗಳು ಪತ್ತೆಯಾದವು. ಬಳಿಕ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಬುಧವಾರ ಬೆಳಗ್ಗೆ 1.30ಕ್ಕೆ ಶಾನು ಮೊಹಮದ್ ಶಫಾನ್ ಹಾಗೂ 2.25ಕ್ಕೆ ನಾಗೇಂದ್ರನ ಮೃತದೇಹ ಪತ್ತೆಯಾಗಿದೆ.
ಕೆರೆಕಟ್ಟೆ ಕೆರೆ ಮಧ್ಯದಲ್ಲಿ 40 ಅಡಿ ಹಾಗೂ ಸುತ್ತಲೂ 10-20 ಅಡಿ ಆಳವಿದೆ. ಈ ಕೆರೆಯಲ್ಲಿ ಪ್ರತಿ ದಿನ ಊರಿನವರು ಈಜಲು ಬರುತ್ತಿರುತ್ತಾರೆ. ಮಂಗಳವಾರ ಮಳೆ ಇದ್ದುದರಿಂದ ಯಾರು ಈಜಲು ಬಂದಿರಲಿಲ್ಲ ಎನ್ನಲಾಗಿದೆ. ಕಾಲು ಜಾರಿ ಬಿದ್ದ ಇಬ್ಬರು ಮಕ್ಕಳಿಗೂ ಸರಿಯಾಗಿ ಈಜಲು ಗೊತ್ತಿರಲಿಲ್ಲ. ಇಬ್ಬರ ಮೃತದೇಹಗಳನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಡಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.