ಈ ಕಳ್ಳರನ್ನು ನೀವೂ ಹೊಗಳುತ್ತೀರಿ- ಏಕೆಂದು ವಿಡಿಯೋ ನೋಡಿ!

kalla
Published on

ಕರಾಚಿ: ಕಳ್ಳತನ, ದರೋಡೆ, ಕೊಲೆ ಮಾಡುವವರಿಗೂ ಹೃದಯ ಎನ್ನುವುದು ಇರುವುದಿಲ್ಲವೆ ಎನ್ನುವ ಪ್ರಶ್ನೆ ಕಾಡುವುದು ಸಹಜ.

ರಸ್ತೆ ಬದಿಯಲ್ಲಿ ನಿಂತವರದ್ದೋ ಇಲ್ಲವೇ ದಾರಿಯಲ್ಲಿ ಹೋಗುತ್ತಿರುವವರನ್ನು ಅಡ್ಡಗಟ್ಟಿಯೋ ದರೋಡೆ ಮಾಡುವುದು, ಪ್ರತಿರೋಧ ಒಡ್ಡಿದರೆ ಕೊಲೆ ಮಾಡುವುದು ಇವೆಲ್ಲವೂ ದಿನನಿತ್ಯದ ಮಾತೇ ಆಗಿಹೋಗಿದೆ. ಕಷ್ಟಪಟ್ಟು ದುಡಿದು ಉಳಿಸಿದ ಹಣವು ಕಣ್ಣೆದುರೇ ಯಾರದ್ದೋ ಪಾಲಾಗುತ್ತಿದ್ದರೂ ಅದನ್ನು ನೋಡಿಯೂ ಅಸಹಾಯಕತೆ ವ್ಯಕ್ತಪಡಿಸದೆ ಬೇರೆ ದಾರಿಯೇ ಇರುವುದಿಲ್ಲ.

ಇಂಥದ್ದರ ನಡುವೆ ಸಿಸಿಟಿಯಲ್ಲಿ ದಾಖಲಾಗಿರುವ ಈ ದರೋಡೆ ಪ್ರಕರಣ ಸ್ವಲ್ಪ ಭಿನ್ನ ಎನಿಸಿದೆ.

ಇಲ್ಲಿ ಒಬ್ಬ ಡೆಲಿವರಿ ಬಾಯ್​, ಅಂಗಡಿ ಒಂದರ ಮುಂದೆ ಪಾರ್ಸೆಲ್​ ಇಟ್ಟು ತನ್ನ ದ್ವಿಚಕ್ರ ವಾಹನದ ಸಮೀಪ ಬರುತ್ತಿದ್ದಂತೆಯೇ ಎಲ್ಲಿಂದಲೋ ಬೈಕ್​ನಲ್ಲಿ ಬಂದ ಇಬ್ಬರು ಬೈಕ್​ ನಿಲ್ಲಿಸಿ ಆತನಲ್ಲಿ ಇರುವುದೆಲ್ಲವನ್ನೂ ದೋಚಿದ್ದಾರೆ. ಕಷ್ಟಪಟ್ಟು ದುಡಿದ ಹಣವನ್ನು ದೋಚಿದ್ದನ್ನು ಕಂಡು ಈ ಡೆಲಿವರಿ ಬಾಯ್​ ಕಣ್ಣೀರಾಗಿದ್ದಾನೆ. ಆದರೆ ಅಸಹಾಯಕನಾಗಿದ್ದಾನೆ.

ಆದರೆ ಕಳ್ಳರಿಗೂ ಮನಸ್ಸು ಇರುತ್ತದೆಯಲ್ಲವೆ? ಈತನ ಕಣ್ಣೀರು ಕಂಡು ಅವರು ಮರುಗಿದ್ದಾರೆ. ಕಳ್ಳತನ ಮಾಡಿದ್ದೆಲ್ಲವನ್ನೂ ವಾಪಸ್​ ಕೊಟ್ಟ ಕಳ್ಳರು, ಆತನನ್ನು ತಬ್ಬಿಕೊಂಡಿದ್ದಾರೆ. ನಂತರ ಷೇಕ್​ಹ್ಯಾಂಡ್​ ಕೂಡ ಮಾಡಿ ಬೈಕ್​ನಲ್ಲಿ ಹೊರಟು ಹೋಗಿದ್ದಾರೆ.

ಕಣ್ಣೀರು ಒರೆಸುಕೊಳ್ಳುತ್ತಾ ಡೆಲಿವರಿ ಬಾಯ್​ ಸಂತೋಷದಿಂದ ಗಾಡಿಯೇರಿ ಬದುಕಿದೆಯಾ ಬಡಜೀವಿಯೇ ಎಂದು ಸಾಗಿದ್ದಾನೆ.

ಇದು  ಪಾಕಿಸ್ತಾನದ ಕರಾಚಿಯಲ್ಲಿ ನಡೆದ ದೃಶ್ಯ ಎನ್ನಲಾಗಿದೆ. ಸಿಸಿಟಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಂತೂ ಇದು ಭಾರಿ ವೈರಲ್​ ಆಗಿದೆ. ಕಳ್ಳತನ ಮಾಡಿದರೂ ಕಳ್ಳರಿಗೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. ನೀವೂ ಹೊಗಳಿರಬೇಕಲ್ಲವೆ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net