ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಬಾಲಕ ಸೇರಿ ಇಬ್ಬರ ಸಾವು

HUN-AUG-28-1(CAR ACCIDENT)
ಹುಣಸೂರು-ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರಿನ ಮುಂಭಾಗ ಜಖಂಗೊಂಡಿರುವುದು.
Published on

ಹುಣಸೂರು: ಹುಣಸೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ನಡೆದ ಪ್ರತ್ಯೇಕ ಅಪಘಾತದಲ್ಲಿ ಮೂರು ವರ್ಷದ ಮಗು ಹಾಗೂ ವೃದ್ದರೊಬ್ಬರು ಮೃತಪಟ್ಟಿದ್ದಾರೆ.

ತಾಳೂಕಿನ ಹಳ್ಳಿಕೆರೆ ಗ್ರಾಮದ ನಿವಾಸಿ ಶಿವಪ್ಪ (64) ಮೃತಪಟ್ಟವರು. ಮೈಸೂರಿನಿಂದ ಹುಣಸೂರಿಗೆ ಬರುತ್ತಿದ್ದ ಹುಣಸೂರು ಡಿಪೋಗೆ ಸೇರಿದ ಬಸ್ ಮನುಗನಹಳ್ಳಿ ಗೇಟ್ ಬಳಿ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಓಡಿಸುತ್ತಿದ್ದ ಸೋಮಶೇಖರ್ ಎಡ ಭಾಗಕ್ಕೆ ಬಿದ್ದರೆ, ಹಿಂಬದಿ ಸವಾರ ಹಳ್ಳಿಕೆರೆ ಗ್ರಾಮದ ನಿವಾಸಿ ಶಿವಪ್ಪ ಚಕ್ರದ ಕೆಳಗಡೆ ಸಿಲುಕಿ ಅವರ ತಲೆ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕೂಟರ್ ಓಡಿಸುತ್ತಿದ್ದ ಸೋಮಶೇಖರ್ ಗಾಯಗೊಂಡಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.

ಬಾಲಕ ಸಾವು: ಹೆದ್ದಾರಿಯ ಮಧುಗಿರಿಕೊಪ್ಪಲು ಬಳಿ ದ್ವಿಚಕ್ರ ವಾಹನಕ್ಕೆ ಕೊಡಗಿನ ಕಡೆಗೆ ಹೂವು ತುಂಬಿಕೊಂಡು ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಎಚ್.ಡಿ.ಕೋಟೆ ತಾಲೂಕಿನ ಮಹದೇಶ್ವರ ಕಾಲನಿ ನಿವಾಸಿ ಸೋಮೇಶ್, ಅಮೂಲ್ಯಾ ದಂಪತಿ ಪುತ್ರ ವೇದಾಂತ್ (3) ಮೃತಪಟ್ಟವನು. ಅಪಘಾತದಲ್ಲಿ ಅಮೂಲ್ಯಾ, ಪುತ್ರಿ ಅನುಶ್ರೀ ತೀವ್ರವಾಗಿ ಗಾಯಗೊಂಡಿದ್ದು, ಸೋಮೇಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಗೆ ಇಬ್ಬರನ್ನು ದಾಖಲಿಸಲಾಗಿದೆ. ಸೋಲಿಗ ಕುಟುಂಬಕ್ಕೆ ಸೇರಿದ ಸೋಮೇಶ್ ಮತ್ತು ಅಮೂಲ್ಯಾ ತಮ್ಮ ಇಬ್ಬರು ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಕನಕಪುರ ತಾಲೂಕಿನ ಯರೇಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮುಂದೆ ಕುಳಿತಿದ್ದ ಮಗು ವೇದಾಂತ್ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರಕರಣಗಳು ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net