

ವಿಜಯವಾಣಿ ಸುದ್ದಿಜಾಲ ಉಡುಪಿಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಕಾಣೆಯಾಗಿದ್ದಾರೆ..!? ಅವರಿಬ್ಬರ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ತಿಳಿಸಿ...!!
ಹೀಗೊಂದು ಪೋಸ್ಟ್ ಕಳೆದ ಮೂರ್ನಾಲ್ಕು ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಲ್ಪೆಯಲ್ಲಿ ಮಾ.18ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರೂ ಸಚಿವರ ಭಾವಚಿತ್ರ ಲಗತ್ತಿಸಿ, ಇವರು ಕೊನೆಯ ಬಾರಿ ಉಡುಪಿಯಲ್ಲಿ ಕಾಣಿಸಿಕೊಂಡಿದ್ದು ತಿಳಿದಿಲ್ಲ ಎಂಬ ಬರಹದ ಪೋಸ್ಟ್, ಜಿಲ್ಲೆಯ ಜನರ ಗಮನ ಸೆಳೆಯುತ್ತಿದೆ.
ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿ ನೇಮಕವಾದ ಬಳಿಕ ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್, ಉಡುಪಿಯಲ್ಲಿಯೇ ಮನೆ ಮಾಡುತ್ತೇನೆ ಎಂದು ಹೇಳಿದ್ದರು. ಮಾತಿನಂತೆ ಉಡುಪಿಯಲ್ಲಿ ಮನೆ ಮಾಡಿದ್ದರೂ ಸಹ ಸರ್ಕಾರ ರಚನೆಯಾಗಿ ಎರಡು ವರ್ಷ ಸಮೀಪಿಸುತ್ತಿದ್ದರೂ ಅವರು ಉಡುಪಿಗೆ ಈವರೆಗೆ ಬಂದದ್ದು ಕೇವಲ ಮೂರ್ನಾಲ್ಕು ಸಲ ಮಾತ್ರ. ಆಗೊಮ್ಮೆ-ಈಗೊಮ್ಮೆ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಮಳೆಯಂತೆ ಅವರು ಬಂದು ಹೋಗುತ್ತಿದ್ದಾರೆ. ಜಿಲ್ಲೆಯ ಜನರ ಸಮಸ್ಯೆಗೆ ಧ್ವನಿಯಾಗುತ್ತಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವೆಯೆಂದರೆ ಮರೀಚಿಕೆ ಎಂಬಂತಾಗಿದೆ ಎಂದು ಜಿಲ್ಲಾ ಬಿಜೆಪಿ ಟೀಕಿಸಿದೆ.
ರಾಜ್ಯಕ್ಕೆ ಗೃಹಲಕ್ಷ್ಮಿ, ಜಿಲ್ಲೆಗೆ ಜೈಲ್ ಲಕ್ಷ್ಮೀ ಗ್ಯಾರಂಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವೆ, ಉಡುಪಿಯಲ್ಲಿ ಕೊನೇ ಬಾರಿ ಕಾಣಿಸಿಕೊಂಡಿದ್ದು ಮಾಹಿತಿ ಇಲ್ಲ. ಸಾರ್ವಜನಿಕವಾಗಿ ಕಂಡರೆ ತಿಳಿಸಿ ಎಂದು ಬರೆಯಲಾಗಿದೆ. ಮೊಗವೀರ ಸಮಾಜದ ಮೀನುಗಾರ ಮಹಿಳೆಯರು ಸುಳ್ಳು ಕೇಸ್ನಿಂದ ಜೈಲ್ ಸೇರಿದ್ದರೂ ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಸೌಜನ್ಯಕ್ಕೂ ಉಡುಪಿಗೆ ಭೇಟಿ ನೀಡಿಲ್ಲ ಎಂದು ಬರಹಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಲಾಗಿದೆ.