ಜಮ್ಮು-ಕಾಶ್ಮೀರದ ಬದ್ಗಾಂನಲ್ಲಿ ಇಬ್ಬರು ಉಗ್ರರ ಹತ್ಯೆ

terarist jammu
Published on

ಶ್ರೀನಗರ: ಜಮ್ಮು-ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರರ ಇರುವಿಕೆಯ ಖಚಿತ ಮಾಹಿತಿ ಪಡೆದ ಸುರಕ್ಷಾ ಪಡೆ ಯೋಧರು ಬದ್ಗಾಂ ಜಿಲ್ಲೆಯ ಛದೂರಾ ಪ್ರದೇಶದ ಮೌಚ್ವಾಹ್​ ಎಂಬಲ್ಲಿ ಶೋಧ ಕಾರ್ಯ ಮತ್ತು ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಮಂಗಳವಾರ ರಾತ್ರಿ 7 ಗಂಟೆಗೆ ಆರಂಭಿಸಿದ್ದರು. 9 ಗಂಟೆ ಸುಮಾರಿಗೆ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದರು.

ಯೋಧರು ಕೂಡ ಪ್ರತಿದಾಳಿ ನಡೆಸಿದ್ದು, ಸಂಘರ್ಷ ನಾಲ್ಕು ಗಂಟೆ ಕಾಲ ಮುಂದುವರಿದಿತ್ತು. ಕೊನೆಗೆ ಇಬ್ಬರು ಉಗ್ರರು ಹತರಾಗಿರುವುದು ಪತ್ತೆಯಾಗಿದೆ. ಅವರು ಯಾವ ಉಗ್ರ ಸಂಘಟನೆಗೆ ಸೇರಿದವರು ಎಂಬಿತ್ಯಾದಿ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಒಬ್ಬ ಉಗ್ರ ವಿದೇಶೀಯ ಎಂಬುದು ತಿಳಿದು ಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net