

ಮಧ್ಯಪ್ರದೇಶ: ಶನಿವಾರ ರಾತ್ರಿ ತಮ್ಮ ನಿವಾಸದಲ್ಲಿ ಮಲಗಿದ್ದ ಒಂದೇ ಕುಟುಂಬದ ಮೂವರು ಹಾವಿನ ಕಡಿತಕ್ಕೆ ತುತ್ತಾದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಭಿಂಡ್‌ನಲ್ಲಿ ವರದಿಯಾಗಿದೆ.
ಹಾವಿನ ಕಡಿತಕ್ಕೆ ಒಳಗಾದ ರಾಧಾ (34) ಮತ್ತು ಅವರ ಮಗಳು ಯೇಶಾ (12) ಮೃತಪಟ್ಟಿದ್ದು, ಮಗ ಕೃಷ್ಣ (12) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ರಾತ್ರಿ ಊಟ ಮುಗಿಸಿ ನೆಲದ ಮೇಲೆ ಮಲಗಿದ್ದಾಗ ಈ ಘಟನೆ ಸಂಭವಿಸಿದೆ.
ಮಲಗಿದ್ದ ರಾಧಾ, ಕೃಷ್ಣ ಮತ್ತು ಯೆಶಾ ಅವರಿಗೆ ಹಾವು ಕಚ್ಚಿದ್ದು, ಕಡಿತದಿಂದ ಉಂಟಾದ ನೋವಿಗೆ ಮಕ್ಕಳು ಚೀರಾಡಿದ್ದಾರೆ. ಕುಟುಂಬದವರ ಜೀವವನ್ನು ಉಳಿಸುವ ಪ್ರಯತ್ನದಲ್ಲಿ, ಸ್ಥಳೀಯರು ಹಾವು ಕಡಿತಕ್ಕೆ ಇರುವ ಸಾಂಪ್ರದಾಯಿಕ ಪರಿಹಾರಗಳನ್ನು ಹುಡುಕಲು ಖಾರ್ಕಿಯಾ ಮೋತಿಪುರ ಗ್ರಾಮಕ್ಕೆ ಧಾವಿಸಿದ್ದಾರೆ. ಆದ್ರೆ, ಯಾವುದೇ ಸೂಕ್ತ ಪರಿಹಾರ ಸಿಗದ ಕಾರಣ ಈ ಪ್ರಯತ್ನಗಳು ವಿಫಲಗೊಂಡಿದೆ.
ನಂತರದಲ್ಲಿ ಕಡಿತಕ್ಕೆ ತುತ್ತಾದವರನ್ನು ಭಾನುವಾರ ಭಿಂಡ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ರಾಧಾ ಮತ್ತು ಯೆಶಾ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಕೃಷ್ಣನಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಗ್ವಾಲಿಯರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಭಿಂಡ್ ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು, "ಕುಟುಂಬದವರು ರಾಧಾ ಮತ್ತು ಅವರ ಮಕ್ಕಳನ್ನು ನೇರವಾಗಿ ಆಸ್ಪತ್ರೆಗೆ ಕರೆತರುವ ಬದಲು, ಸಾಂಪ್ರದಾಯಿಕ ಪರಿಹಾರಗಳಲ್ಲಿ ಸಮಯವನ್ನು ವ್ಯರ್ಥ ಮಾಡಿದ್ದಾರೆ" ಎಂದು ಹೇಳಿದರು,(ಏಜೆನ್ಸೀಸ್).