ಮೊನ್ನೆ ಬರ್ತಡೇ ಗಿಫ್ಟ್​ ಪಡೆದಿದ್ದ ಬೈಕ್​ನಿಂದಲೇ ಹೋಯ್ತು ವಿದ್ಯಾರ್ಥಿಗಳಿಬ್ಬರ ಪ್ರಾಣ: ಬೈಕ್​ನಲ್ಲಿತ್ತು ರಹಸ್ಯ ವಸ್ತು!

Accident
Published on

ಹೈದರಾಬಾದ್​: ನಿಯಂತ್ರಣ ಕಳೆದುಕೊಂಡ ಬೈಕ್​ ಡಿವೈಡರ್​ ಡಿಕ್ಕಿ ಹೊಡೆದು ಇಬ್ಬರು ಇಂಜಿನಿಯರ್​ ವಿದ್ಯಾರ್ಥಿಗಳು ಸಾವಿಗೀಡಾಗಿರುವ ಘಟನೆ ಹೈದರಾಬಾದ್​ನ ಕುತುಬುಲ್ಲಾಪುರ ಬಳಿಯ​ ಸುರಾರಾಮ್​ನಲ್ಲಿ ನಡೆದಿದೆ.

ಮೃತರನ್ನು ನಿಜಾಮಬಾದ್​ನ ಕೊಡಿಗಿರಿ ಮಂಡಲದ ಅನಂತ ವಿಶಾಲ್ (21) ಮತ್ತು ಮಂಚೇರಿಯಲ್​ನ ಗೊಪರಾಜು ಸುಜಿತ್​ ಕುಮಾರ್​ (23) ಎಂದು ಗುರುತಿಸಲಾಗಿದೆ. ಇಬ್ಬರು ಅಂತಿಮ ವರ್ಷದ ಇಂಜಿನಿಯರ್​ ವಿದ್ಯಾರ್ಥಿಗಳಾಗಿದ್ದರು. ಗೋಪರಾಜು ಡಿಸೆಂಬರ್​ 3ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಉಡುಗೊರೆಯಾಗಿ ಬೈಕ್​ ಕೊಡಿಸಿದ್ದರು. ಅದೇ ಬೈಕ್​ನಿಂದ ಇದೀಗ ಪ್ರಾಣ ಹೋಗಿದೆ.

ಇಬ್ಬರು ಸಹ ಮೇಡ್ಚಲ್​ನ ಮೈಸಮ್ಮಗುಡ್ಡದ ಸೆಂಟ್​ ಪೀಟರ್ಸ್​ ಇಂಜಿನಿಯರ್​ ಕಾಲೇಜು ವಿದ್ಯಾರ್ಥಿಗಳು. ಕಾಲೇಜು ಸಮೀಪದ ಮಹಾಲಕ್ಷ್ಮೀ ಬಾಯ್ಸ್​ ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದರು. ಸುರಾರಾಮ್​ನ ಕಟ್ಟಾ ಮೈಸಮ್ಮ ದೇವಸ್ಥಾನದ ಬಳಿ ಯಮಹಾ ಬೈಕ್​ ಅಪಘಾತವಾಗಿರುವ ಬಗ್ಗೆ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ದುಂಡಿಗಲ್​ ಕಂಟ್ರೋಲ್​ ರೂಮ್​ಗೆ ಕರೆ ಬರುತ್ತದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಇಬ್ಬರು ಸಹ ಗಂಭೀರ ಗಾಯದಿಂದ ಸ್ಥಳದಲ್ಲೇ ಮೃತಪಟ್ಟಿದ್ದರು. ಹಲ್ಮೆಟ್​ ಧರಿಸದೇ ಇದ್ದದ್ದು ಸಾವಿಗೆ ಕಾರಣವಾಗಿದೆ.

ಇಬ್ಬರು ಗುರುತನ್ನು ಪತ್ತೆಹಚ್ಚಲು ಪೊಲೀಸರು ಗುರುತಿನ ಚೀಟಿಗಾಗಿ ಹುಡುಕಾಡಿದಾಗ ಕೆಂಪು ಬಣ್ಣದ ಪ್ಯಾಕ್​ ಒಂದು ಪತ್ತೆಯಾಗಿದೆ. ತೆರೆದು ನೋಡಿದಾಗ ಅದರಲ್ಲಿ ಒಂದು ಕೆ.ಜಿ ಗಾಂಜಾ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಸಮಯದಲ್ಲಿ ಇಬ್ಬರು ಹಾಸ್ಟೆಲ್​ನಿಂದ ಬರುತ್ತಿದ್ದರು.

ಮೃತರು ಗಾಂಜಾ ಸೇವಿಸಿದ್ದರಾ ಎಂದು ತಿಳಿಯಲು ರಕ್ತದ ಮಾದರಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಅಪರಿಚಿತರಿಂದ ಗಾಂಜಾ ಪಡೆದು ಮರಳಿ ಹಾಸ್ಟೆಲ್​ಗೆ ಬರುವಾಗ ಅಪಘಾತ ಸಂಭವಿಸಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಾಂಜಾ ಮೂಲ ಯಾವುದು ಎಂಬ ಪತ್ತೆಗೆ ಬಲೆ ಬೀಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net