

ಅಂಕೋಲಾ: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದಲ್ಲಿ ಮಗುಚಿ ಬಿದ್ದು ಲಕ್ಷಾಂತರ ರೂ. ಹಾನಿ ಸಂಭವಿಸಿದ ಘಟನೆ ತಾಲೂಕಿನ ಹಾರವಾಡ- ಬೆಲೇಕೇರಿ ಸಮುದ್ರ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ದೋಣಿಯಲ್ಲಿದ್ದ ಇಬ್ಬರು ಮೀನುಗಾರರನ್ನು ಸ್ಥಳೀಯ ಇತರ ದೋಣಿಯವರು ರಕ್ಷಿಸಿದ್ದಾರೆ. ಶ್ರೀ ಲಕ್ಷ್ಮೀ ರವಳನಾಥ ನಾಡದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಸಮುದ್ರದಲ್ಲಿ ಒಮ್ಮೆಲೆ ಬಂದ ಅಲೆಗಳ ರಭಸಕ್ಕೆ ದೋಣಿ ಮಗುಚಿಬಿದ್ದ ಪರಿಣಾಮವಾಗಿ ಇಂಜಿನ್ ಹಾಗೂ ಬಲೆ ಸೇರಿ ಲಕ್ಷಾಂತರ ರೂ. ಮೌಲ್ಯದ ಹಾನಿ ಅಂದಾಜಿಸಲಾಗಿದೆ.
ಅಕ್ಕಪಕ್ಕದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರರು ದೋಣಿ ಅವಘಡದಲ್ಲಿ ಸಮುದ್ರ ನೀರಿನಲ್ಲಿ ಬಿದ್ದು ಗಾಯಗೊಂಡ ಬಾಬು ಯಶವಂತ ಟಾಕೇಕರ ಮತ್ತು ಸೋಮನಾಥ ಸೂರ್ಯಕಾಂತ ಅವರನ್ನು ರಕ್ಷಣೆ ಮಾಡಿ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಬೆಲೇಕೇರಿ ಕರಾವಳಿ ಕಾವಲು ಪಡೆಯ ಪಿಎಸ್ಐ ಪ್ರಿಯಾಂಕ, ಸಿಬ್ಬಂದಿ, ಕೆಎನ್ಡಿ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರಾದ ನಿತ್ಯಾನಂದ ಸಾಧಿಯೇ, ಅಭಿಷೇಕ ಲುಮಾಜಿ, ರಾಹುಲ್ ಗಿರಫ್ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.