ಪನೋರಮಾಗೆ ಕನ್ನಡದಿಂದ ಎರಡು ಚಿತ್ರಗಳು..

Panorama
Published on

ಬೆಂಗಳೂರು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುಹೆಚ್ಚು ಸುದ್ದಿ ಮಾಡುತ್ತಿವೆ. ಈಗಾಗಲೇ ಒಂದಿಷ್ಟು ಕನ್ನಡ ಚಿತ್ರಗಳು ಬೇರೆಬೇರೆ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುತ್ತಿವೆ. ಈ ಸಾಲಿಗೆ ಇನ್ನೂ ಎರಡು ಹೊಸ ಚಿತ್ರಗಳು ಸೇರ್ಪಡೆಯಾಗಿವೆ.

ಗೋವಾದ ಪಣಜಿಯಲ್ಲಿ ನವೆಂಬರ್ 20ರಿಂದ 28ರವರೆಗೂ ನಡೆಯಲಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ ಕನ್ನಡದ ಎರಡು ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಈ ಪೈಕಿ ‘ಹದಿನೇಳೆಂಟು’ ಎಂಬ ಚಿತ್ರವು ಪನೋರಮಾದ ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಳ್ಳುತ್ತಿದೆ. ಈ ಚಿತ್ರವನ್ನು ಪೃಥ್ವಿ ಕೊಣನೂರು ನಿರ್ದೇಶನ ಮಾಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ವಿಡಿಯೋವೊಂದು ಇಂಟರ್​ನೆಟ್​ನಲ್ಲಿ ಲೀಕ್ ಆಗುತ್ತದೆ.

ಈ ಘಟನೆ ಅವರ ಜೀವನದಲ್ಲಿ ಯಾವ ಪರಿಣಾಮ ಬೀರುತ್ತದೆ ಎಂಬ ಕಥೆ ಇರುವ ಈ ಚಿತ್ರದಲ್ಲಿ ಶರ್ಲಿನ್ ಭೋಂಸ್ಲೆ, ನೀರಜ್ ಮ್ಯಾಥ್ಯೂ ಮುಂತಾದವರು ನಟಿಸಿದ್ದಾರೆ. ಇದಲ್ಲದೆ, ಕೃಷ್ಣೇಗೌಡ ನಿರ್ದೇಶನದ ‘ನಾನು ಕುಸುಮಾ’ ಎಂಬ ಚಿತ್ರವೂ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಬಾರಿ 25 ಫೀಚರ್ ಸಿನಿಮಾಗಳು ಮತ್ತು 20 ಸಾಕ್ಷ್ಯಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದ್ದು, ಈ ಪೈಕಿ ಫೀಚರ್ ವಿಭಾಗದಲ್ಲಿ ಕನ್ನಡದಿಂದ ‘ಹದಿನೇಳೆಂಟು’ ಮತ್ತು ‘ನಾನು ಕುಸುಮಾ’ ಪ್ರದರ್ಶನಗೊಂಡರೆ, ಸಾಕ್ಷ್ಯಚಿತ್ರಗಳ ಪೈಕಿ ‘ಮಧ್ಯಂತರ’ ಎಂಬ ಚಿತ್ರವಿದೆ. ಪನೋರಮಾ ವಿಭಾಗದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’, ‘ಅಖಂಡ’, ‘ಆರ್​ಆರ್​ಆರ್’ ಮುಂತಾದ ಜನಪ್ರಿಯ ಚಿತ್ರಗಳು ಸಹ ಪ್ರದರ್ಶನವಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net