

ಮೈಸೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ಹಾಗೂ ಕೊಡಗಿನ ‘ನಾವು ಪ್ರತಿಷ್ಠಾನ ಸಂಸ್ಥೆ’ ಸಹಯೋಗದಲ್ಲಿ ಜಿಲ್ಲೆಯ ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಮಕ್ಕಳ ಸಂವಿಧಾನ ಕ್ಲಬ್ ಕುರಿತಂತೆ ಇತ್ತೀಚೆಗೆ ಎರಡು ದಿನಗಳ ತರಬೇತಿ ಕಾರ್ಯಗಾರ ಆಯೋಜಿಸಲಾಗಿತ್ತು.
ಇಲವಾಲದ ಡಾ.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ದಿನ ನಿತ್ಯದ ಬದುಕಿನಲ್ಲಿ ಸಂವಿಧಾನದ ಆಶಯದಡಿ ಅಳವಡಿಸಿಕೊಳ್ಳುವ ಮೌಲ್ಯಗಳು, ಅಗತ್ಯ ಕೌಶಲಗಳನ್ನು ಮಕ್ಕಳಿಗೆ ಕಲಿಸುವ ಉದ್ದೇಶ ಮೈಸೂರು ಜಿಲ್ಲೆಯ ಎಲ್ಲ ಕ್ರೈಸ್ ವಸತಿ ಶಾಲೆಗಳ ಸಮಾಜ ವಿಜ್ಞಾನ ಶಿಕ್ಷಕರಿಗೆ ಮಕ್ಕಳ ಸಂವಿಧಾನ ಕ್ಲಬ್ ಕಾರ್ಯ ಚಟುವಟಿಕೆ ಕುರಿತು ಮಾಹಿತಿ ನೀಡಲಾಯಿತು.
ಪ್ರಾಂಶುಪಾಲೆ ಪಿ. ಪ್ರಮೀಳಾ ಮಾತನಾಡಿ, ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಅಷ್ಟೇ ಸಂವಿಧಾನಿಕ ಮೌಲ್ಯಗಳ ಅರಿವು ಮತ್ತು ಜೀವನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸಂವಿಧಾನ ಕ್ಲಬ್ ಕಾರ್ಯಕ್ರಮ ತುಂಬಾ ಪ್ರಯೋಜನಕಾರಿಯಾಗಿದೆ. ಜೀವನಕ್ಕೆ ಬೇಕಾದ ಕೌಶಲಗಳನ್ನು, ಮೌಲ್ಯಗಳನ್ನು ಇತರ ವಿಷಯಗಳಲ್ಲಿ ಮಕ್ಕಳು ಕಲಿತರೆ, ಸಮಾಜದಲ್ಲಿ ಹೇಗೆ ಬದುಕ ಬೇಕು ಮತ್ತು ಬದಲಾವಣೆ ತರಬೇಕು ಎಂಬುದನ್ನು ಸಮಾಜ ವಿಜ್ಞಾನ ಶಿಕ್ಷಕರ ಮೂಲಕ ಕಲಿಯುತ್ತಾರೆ. ಆದ್ದರಿಂದ ಸಮಾಜ ವಿಜ್ಞಾನ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದರು.
ಈ ಚಟುವಟಿಕೆ ಆಧಾರಿತ ತರಗತಿಗಳನ್ನು ಯಶಸ್ವಿಯಾಗಿ ಮಕ್ಕಳಿಗೆ ತಲುಪಿಸಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಕ್ರೈಸ್‌ನ ಸಮಾಜ ವಿಜ್ಞಾನ ಶಿಕ್ಷಕರ ಶ್ರಮಿಸಬೇಕು. ಕಳೆದ ವರ್ಷದಂತೆ ಈ ವರ್ಷವೂ ಕೂಡ ಎಲ್ಲ ಶಾಲೆಗಳಲ್ಲೂ ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಮಕ್ಕಳ ಸಂವಿಧಾನ ಕ್ಲಬ್ ತರಗತಿಗಳನ್ನು ಪೂರ್ಣಗೊಳಿಸಲು ತಿಳಿಸಿದರು.
‘ನಾವು ಪ್ರತಿಷ್ಠಾನ ಸಂಸ್ಥೆ’ಯ ಸಂಸ್ಥಾಪಕ ಗೌತಮ್ ಕಿರಗಂದೂರು ಮಾತನಾಡಿ, ಲಾಭಾಪೇಕ್ಷೆಯಿಲ್ಲದೆ ಐದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ನಾವು ಪ್ರತಿಷ್ಠಾನ ಮಕ್ಕಳ ಹಕ್ಕು ಮತ್ತು ರಕ್ಷಣೆಯ ಕುರಿತು ನಾಗರಿಕತ್ವ ಶಿಕ್ಷಣವನ್ನು ಮಕ್ಕಳಿಗೆ ತಲುಪಿಸುವ ಸಲುವಾಗಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಮಕ್ಕಳ ಗ್ರಂಥಾಲಯ, ಮಕ್ಕಳ ಕಲಿಕಾ ಕೇಂದ್ರ ಸ್ಥಾಪನೆ ಮಾಡಿ ಮಕ್ಕಳಿಗಾಗಿ ಅನೇಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ ಎಂದು ಹೇಳಿದರು.
ಮಕ್ಕಳು ಎಳೆಯ ವಯಸ್ಸಿನಲ್ಲಿ ಸರ್ಕಾರದೊಟ್ಟಿಗೆ ಭಾಗವಹಿಸುವ ಕೌಶಲವನ್ನು ಬೆಳೆಸಿಕೊಂಡರೆ, ಪ್ರಶ್ನಿಸುವ ಧೈರ್ಯ, ಕೌಶಲಗಳನ್ನು, ಸಂವಿಧಾನದ ಆಶಯಗಳನ್ನು ಕಾಪಾಡಿ ಪಾಲಿಸಲು ನೆರವಾಗುತ್ತದೆ. ಅವರ ವ್ಯಕ್ತಿತ್ವದ ಭಾಗವಾಗಿಸಿದರೆ ಮತ್ತು ಇವತ್ತಿನ ಸವಾಲುಗಳನ್ನು ಎದುರಿಸುವ ಯುಕ್ತಿಯನ್ನು ಅವರಿಗೆ ತುಂಬಿಸಿ ಅವರನ್ನು ಸಶಕ್ತನಾಗಿಸಿದರೆ ಅವರು ಉತ್ತಮ ಮಾನವೀಯ ಮೌಲ್ಯವುಳ್ಳ ವ್ಯಕ್ತಿಯಾಗಿ ರೂಪುಗೊಳ್ಳುವಲ್ಲಿ, ಸಾಮರಸ್ಯದ ಬದುಕು ಕಟ್ಟಿಕೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ. ಮಕ್ಕಳ ಸಂವಿಧಾನ ಕ್ಲಬ್ಗಳು ಆ ನಿಟ್ಟಿನಲ್ಲಿ ಮಕ್ಕಳನ್ನು ತಯಾರಿಸಲು ಸಹಕಾರಿಯಾಗಿದೆ ಎಂದು ನಾವು ಪ್ರತಿಷ್ಠಾನ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಸುಮನಾ ಹೇಳಿದರು.
ತರಬೇತಿ ಕಾರ್ಯಗಾರದ ಸಮಾರೋಪದಲ್ಲಿ ಶಾಲೆಯ ಪ್ರಾಂಶುಪಾಲೆ ಪ್ರಮೀಳಾ, ಕ್ರೈಸ್ ವಸತಿ ಶಾಲೆಯ ಸಮಾಜ ಶಿಕ್ಷಕಕಿ ಟಿ.ಹೇಮಾವತಿ, ವಿಜ್ಞಾನ ಶಿಕ್ಷಕರು, ವಿದ್ಯಾರ್ಥಿಗಳು, ತರಬೇತಿ ತಂಡದ ನವೀನ್, ಸುಮನಾ, ಸಿ.ಸವಿತಾ, ಸಂಸ್ಥೆಯ ಸಹನಾ, ತೇಜಸ್ವಿ ಇತರರಿದ್ದರು.