ನೀರಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತ್ಯು

dhanraj chaya
ಛಾಯಾ, ಧನರಾಜ್ ಮೃತಪಟ್ಟ ಮಕ್ಕಳು
Published on

ಕುಂದಾಪುರ: ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳಾಲ ಗ್ರಾಮದ ನಂದ್ರೊಳಿಯಲ್ಲಿ ಶನಿವಾರ ಕೆರೆಯಲ್ಲಿ ಮುಳುಗಿ ಸಹೋದರ-ಸಹೋದರಿ ಮೃತಪಟ್ಟಿದ್ದಾರೆ. ಧನರಾಜ್(13), ಛಾಯಾ(7) ಮೃತಪಟ್ಟ ಮಕ್ಕಳು. ಮಕ್ಕಳನ್ನು ರಕ್ಷಿಸಲು ಹೋಗಿ ನೀರಿನಲ್ಲಿ ಮುಳುಗಿದ್ದ ತಾಯಿ ಶೀಲಾ ಮಡಿವಾಳ ಅವರನ್ನು ರಕ್ಷಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆ ಹತ್ತಿರದ ಗದ್ದೆಯಲ್ಲಿದ್ದ ಕೆರೆಯಲ್ಲಿ ಛಾಯಾ ಕಾಲು ಜಾರಿ ಬಿದ್ದಾಗ ರಕ್ಷಿಸಲು ಅಣ್ಣ ಧನರಾಜ್ ಹೋಗಿದ್ದು, ಇಬ್ಬರೂ ನೀರಲ್ಲಿ ಮುಳುಗಿದ್ದಾರೆ. ಆ ಬಳಿಕ ತಾಯಿ ಮಕ್ಕಳ ರಕ್ಷಣೆಗೆಂದು ಹೋದಾಗ ತಾಯಿ ಕೂಡ ನೀರಿನಲ್ಲಿ ಬಿದ್ದಿದ್ದು, ಸ್ಥಳೀಯರು ಶೀಲಾ ಅವರನ್ನು ರಕ್ಷಿಸಿ ಆಂಬುಲೆನ್ಸ್‌ನಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ 112 ಪೊಲೀಸ್ ಸಿಬ್ಬಂದಿ ಜೀಪು ಚಾಲಕ ದಿನೇಶ್ ಪಿ.ಬೈಂದೂರು ಹಾಗೂ ಕಾನ್‌ಸ್ಟೆಬಲ್ ರಾಮಚಂದ್ರ ಜೀವನ್ಮರಣದ ಸ್ಥಿತಿಯಲ್ಲಿದ್ದ ಛಾಯಾಳನ್ನು ಕುಂದಾಪುರ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಛಾಯಾ ಅದಾಗಲೇ ಮೃತಪಟ್ಟಿದ್ದಳು. ಮಕ್ಕಳು ವಂಡ್ಸೆ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಾಗಿದ್ದರು. ಶೀಲಾ ಅವರ ಪತಿ ಸತೀಶ್ ಮಡಿವಾಳ ವಿಜಯಪುರದಲ್ಲಿ ಹೋಟೆಲ್ ಕಾರ್ಮಿಕರಾಗಿದ್ದಾರೆ.ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net