

ನವದೆಹಲಿ: ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಒಗ್ಗೂಡಿ ಐಕ್ಯತೆ ಪ್ರದರ್ಶಿಸಲು ಪ್ರಧಾನಿ ಮೋದಿ ಇಂದು ಬೆಳಗ್ಗೆ ವಿಡಿಯೋ ಸಂದೇಶದಲ್ಲಿ ದೇಶದ ಜನತೆಯ ಬಳಿ ಮನವಿ ಮಾಡಿದರು. ಇದಾದ ಕೆಲವೇ ಕ್ಷಣಗಳಲ್ಲಿ ಮೋದಿ ಸಂದೇಶಕ್ಕೆ ಅನುಗುಣವಾಗಿ ಟ್ವಿಟರ್ನಲ್ಲಿ ಮೀಮ್ಸ್ಗಳ ರೂಪದಲ್ಲಿ ಬೆಳಕಿನ ಕಿಡಿ ಹೊತ್ತಿಕೊಂಡಿದೆ.
ಏಪ್ರಿಲ್ 5ರ ರಾತ್ರಿ 9 ಗಂಟೆಗೆ ಕೇವಲ 9 ನಿಮಿಷ ಮೀಸಲಿಡಿ. ನಿಮ್ಮ ಮನೆಯ ಎಲ್ಲ ಲೈಟ್ಸ್ಗಳನ್ನು ಆಫ್ ಮಾಡಿ, ಮೇಣದ ಬತ್ತಿ, ಮೊಬೈಲ್ ಫ್ಲ್ಯಾಶ್ಲೈಟ್ ಹಾಗೂ ದೀಪಗಳನ್ನು ಬೆಳಗುವುದರ ಮೂಲಕ ನಾವೆಲ್ಲರೂ ಕರೊನಾ ವಿರುದ್ಧ ಹೋರಾಡುತ್ತಿದ್ದೇವೆ ಎಂಬ ಸಂದೇಶವನ್ನು ನೀಡಿ ಎಂದು ಪ್ರಧಾನಿ ಮೋದಿ ಜನರ ಬಳಿ ವಿನಂತಿಸಿಕೊಂಡಿದ್ದಾರೆ.
ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಮಂದಿ ಪ್ರಧಾನಿ ಮೋದಿ ಸಂದೇಶವನ್ನು ವೀಕ್ಷಿಸಿದ್ದಾರೆ. ಹೀಗಾಗಿ ಏಪ್ರಿಲ್ 5ರಂದು ನಾವು ಹೇಗೆ ಆಚರಿಸುತ್ತೇವೆ ಎಂಬುದನ್ನು ಮೀಮ್ಸ್ ಮೂಲಕ ನೆಟ್ಟಿಗರು ವಿಭಿನ್ನವಾಗಿ ವಿವರಿಸಿದ್ದಾರೆ.
ಹ್ಯಾಪಿಡೆಂಟ್ ಜಾಹಿರಾತು ಮತ್ತೆ ಅದ್ಧೂರಿಯಾಗಿ ಮರಳಲಿದೆ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 5ರ ರಾತ್ರಿ ಭಾರತೀಯರೆಲ್ಲ ಈ ರೀತಿ ಇರುತ್ತಾರೆ ಎಂದು ಫೋಟೋ ಮೂಲಕ ಮತ್ತೋರ್ವ ನೆಟ್ಟಿಗ ಚಿತ್ರೀಕರಿಸಿದ್ದಾರೆ. ನಮ್ಮ ಮೆಚ್ಚಿನ ಪ್ರಧಾನಿ ಮೋದಿ 5ರ ರಾತ್ರಿ ಲೈಟ್ ಶೋ ಆಯೋಜಿಸಿದ್ದಾರೆ ಎಂದು ಇನ್ನೋರ್ವ ಕಿಚಾಯಿಸಿದ್ದು, ಹೀಗೆ ನಾನಾ ರೀತಿಯಲ್ಲಿ ಪ್ರಧಾನಿ ಸಂದೇಶವನ್ನು ನೆಟ್ಟಿಗರು ವೈರಲ್ ಮಾಡುತ್ತಿದ್ದಾರೆ. (ಏಜೆನ್ಸೀಸ್)