More

    ಇಪ್ಪತ್ತಾರು ಲಕ್ಷ ರೂ. ಉಳಿತಾಯ ಬಜೆಟ್

    ಕೆ.ಆರ್.ನಗರ: ಪಟ್ಟಣದ ಪುರಸಭಾ ಆಡಳಿತಾಧಿಕಾರಿ ಹಾಗೂ ಹುಣಸೂರಿನ ಉಪ ವಿಭಾಗಾಧಿಕಾರಿಗಳಾದ ಮೊಹಮದ್ ಹಾರಿಸ್ ಸುಮೈರ್ ಅವರ ಪರವಾಗಿ ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ ಪುರಸಭೆಯ 2024-25ನೇ ಸಾಲಿನಲ್ಲಿ 26.13 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ ಮಾಡಿದರು.

    ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ಕರೆಯಲಾಗಿದ್ದ ಸಭೆಯಲ್ಲಿ 2024-25ನೇ ಸಾಲಿನ ಆಯವ್ಯಯ ಮಂಡನೆ ಮಾಡಿದರು. 2024-25ನೇ ಸಾಲಿನ ಆಯವ್ಯಯದ ಘೋಷ್ವಾರ ಆರಂಭ ಶಿಲ್ಕು 6.92 ಕೋಟಿ ರೂ., ರಾಜಸ್ವ ಖಾತೆಯಲ್ಲಿ ಸ್ವೀಕೃತಿಗಳು 12.16 ಕೋಟಿ ರೂ., ಪಾವತಿಗಳು 11.11 ಕೋಟಿ ರೂ., ರಾಜಸ್ವ ಖಾತೆಯಲ್ಲಿನ ಹೆಚ್ಚುವರಿ ಬಾಬ್ತು 1.05 ಕೋಟಿ ರೂ., ಬಂಡವಾಳ ಖಾತೆಯ ಸ್ವೀಕೃತಿಗಳು 6.32 ಕೋಟಿ ರೂ., ಪಾವತಿಗಳು 6.92 ಕೋಟಿ ರೂ., ಬಂಡವಾಳ ಖಾತೆಯಲ್ಲಿ ಕೊರತೆ 64 ಲಕ್ಷ ರೂ., ಅಸಾಧಾರಣ ಖಾತೆಯ ಸ್ವೀಕೃತಿ 2.35 ಕೋಟಿ ರೂ., ಪಾವತಿಗಳು 2.50 ಕೋಟಿ ರೂ., ಅಸಾಧಾರಣ ಖಾತೆಯ ಶಿಲ್ಕು -14.70 ಲಕ್ಷ ರೂ., ಉಳಿತಾಯ 26.13 ಲಕ್ಷ ರೂ.

    ಮುಖ್ಯಾಂಶಗಳು: ಪುರಸಭೆ ಸ್ವಂತ ಅಂದಾಜು ಆದಾಯ ಆಸ್ತಿ ತೆರಿಗೆಯಿಂದ 2.80 ಕೋಟಿ ರೂ., ನೀರಿನ ತೆರಿಗೆ 92 ಲಕ್ಷ ರೂ., ಪುರಸಭಾ ಮಳಿಗೆಗಳಿಂದ ಬಾಡಿಗೆ 90 ಲಕ್ಷ ರೂ., ಉದ್ದಿಮೆ ಪರವಾನಗಿಯಿಂದ 15.8 ಲಕ್ಷ ರೂ., ಕಟ್ಟಡ ಪರವಾನಗಿ, ಮೇಲ್ವಿಚಾರಣೆ, ಖಾತೆ ಬದಲಾವಣೆ ಇತರೆ ಬಾಬ್ತುಗಳಿಂದ 1.80 ಕೋಟಿ ರೂ.ಗಳಾಗಿದೆ.

    ಸರ್ಕಾರದಿಂದ ಬರಬಹುದಾದ ಅನುದಾನ: 15ನೇ ಹಣಕಾಸು ಅನುದಾನ 1.60 ಕೋಟಿ ರೂ, ಎಸ್‌ಎಫ್‌ಸಿ ಅನುದಾನ 70 ಲಕ್ಷ ರೂ., ಎಸ್.ಎಫ್.ಸಿ. ವಿದ್ಯುತ್ ಶಕ್ತಿ ಅನುದಾನ 1.50 ಕೋಟಿ, ಎಸ್.ಎಫ್.ಸಿ. ವೇತನ ಅನುದಾನ 3.25 ಕೋಟಿ, ಎಸ್.ಎಫ್.ಸಿ. ವಿಶೇಷ ಅನುದಾನ ರೂ.4.05 ಕೋಟಿ ಅನುದಾನ, ಎಸ್.ಎಫ್.ಸಿ ಕುಡಿಯುವ ನೀರಿನ ಅನುದಾನ 3 ಲಕ್ಷಗಳು, ಸ್ವಚ್ಛ ಭಾರತ್ ಮಿಷನ್ ಅನುದಾನ 1.30 ಕೋಟಿ ರೂ.

    ಖರ್ಚುಗಳು: ಪುರಸಭೆ ಕಚೇರಿಯ ನಿರ್ವಹಣೆ ಅಂದಾಜು ವೆಚ್ಚ 65.25 ಲಕ್ಷ ರೂ., ಕಟ್ಟಡಗಳು, ರಸ್ತೆಗಳು, ಚರಂಡಿಗಳು, ಕಲ್ವರ್ಟ್‌ಗಳು, ಮ್ಯಾನ್ ಹೋಲ್‌ಗಳ ದುರಸ್ತಿ ಹಾಗೂ ನಿರ್ವಹಣೆಗೆ 70 ಲಕ್ಷ ರೂ. ವೆಚ್ಚ. ಬೀದಿ ದೀಪ ನಿರ್ವಹಣೆಗೆ 35 ಲಕ್ಷ ರೂ., ಪುರಸಭೆ ಸದಸ್ಯರ ಪ್ರವಾಸ ಅಧ್ಯಯನಕ್ಕೆ 10 ಲಕ್ಷ ರೂ., ವಾಹನಗಳ ಇಂಧನ ಹಾಗೂ ದುರಸ್ತಿ ಮತ್ತು ನಿರ್ವಹಣೆಗೆ 25 ಲಕ್ಷ ರೂ., ಹೊರಗುತ್ತಿಗೆ ನೌಕರರು ಹಾಗೂ ನೇರಪಾವತಿ ನೌಕರರ ವೇತನ 58 ಲಕ್ಷ ರೂ., ಪೌರಕಾರ್ಮಿಕರ ಆರೋಗ್ಯ ತಪಾಸಣೆಗೆ 3 ಲಕ್ಷ ರೂ., ಪೌರಕಾರ್ಮಿಕರ ಬೆಳಗಿನ ಉಪಹಾರಕ್ಕೆ 10 ಲಕ್ಷ ರೂ., ಪೌರಕಾರ್ಮಿಕರಿಗೆ ವಿಮೆ ಮಾಡಿಸಲು 6 ಲಕ್ಷ ರೂ., ನೀರು ಸರಬರಾಜಿಗೆ 94 ಲಕ್ಷ ರೂ. ವೆಚ್ಚ. ಕಚೇರಿ ಯಂತ್ರೋಪಕರಣ ಹಾಗೂ ಕಂಪ್ಯೂಟರ್‌ಗಳಿಗೆ 11 ಲಕ್ಷ ರೂ., ರಸ್ತೆಗಳ ನಿರ್ಮಾಣಕ್ಕೆ 2 ಕೋಟಿ ರೂ., ಚಂರಂಡಿಗಳ ನಿರ್ಮಾಣಕ್ಕೆ 1 ಕೋಟಿ ರೂ., ಮಳೆ ನೀರು ಚರಂಡಿ ನಿರ್ಮಾಣಕ್ಕೆ 18 ಲಕ್ಷ ರೂ., ಸ್ಮಶಾನ ಅಭಿವೃದ್ಧಿಗೆ 30 ಲಕ್ಷ ರೂ., ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ಅಭಿವೃದ್ಧಿಗೆ 1.38 ಕೋಟಿ ರೂ., ನೀರು ಸರಬರಾಜು ವಿಭಾಗಕ್ಕೆ 50 ಲಕ್ಷ ರೂ., ಯುಜಿಡಿ ಸಂಪರ್ಕ ಕಲ್ಪಿಸಲು 20 ಲಕ್ಷ ರೂ., ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ 1 ಕೋಟಿ ರೂ., ಉದ್ಯಾನವನಗಳ ಅಭಿವೃದ್ಧಿಗೆ 50 ಲಕ್ಷ ರೂ. ವೆಚ್ಚ ನಿಗದಿಯಾಗಿದೆ.

    ಸ್ಮಶಾನ ವಿಸ್ತರಣೆ ಅಗತ್ಯ: ನಂತರ ಬಜೆಟ್ ಕುರಿತು ಮಾತನಾಡಿದ ಸದಸ್ಯ ಉಮೇಶ್ ಸ್ಮಶಾನ ಅಭಿವೃದ್ಧಿಗೆ 30 ಲಕ್ಷ ರೂ., ಮೀಸಲಿಡಲಾಗಿದ್ದು ಪಟ್ಟಣದಲ್ಲಿರುವ ಸಾರ್ವಜನಿಕ ಸ್ಮಶಾನಕ್ಕೆ ಜಾಗ ಕಡಿಮೆಯಿದೆ. ಶವಗಳನ್ನು ಹೂಳಲು ಜಾಗವಿಲ್ಲ. ಆದ್ದರಿಂದ ಪಕ್ಕದಲ್ಲಿರುವ ಖಾಸಗಿ ಜಮೀನಿನವರ ಭೂಮಿಯನ್ನು ಖರೀದಿಸಿ ಸ್ಮಶಾನವನ್ನು ವಿಸ್ತರಿಸಬೇಕು. ಪೌರಕಾರ್ಮಿಕರ ಕೊರತೆ ಇದ್ದು, ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಹಾಗೂ ಪ್ರತಿ ಬಾರಿ ಪತ್ರಕರ್ತರ ಆರೋಗ್ಯ ನಿಧಿಗೆ 2 ಲಕ್ಷ ರೂ. ಇಡಲಾಗುತ್ತಿದ್ದು, ಈ ಬಾರಿ ಇಟ್ಟಿಲ್ಲ ಯಾಕೆ ? ಎಂದು ಪ್ರಶ್ನಿಸಿದರು.

    ಸದಸ್ಯ ನಟರಾಜ್ ಮಾತನಾಡಿ, ನಮ್ಮ ಪಟ್ಟಣ ಬಹಳ ವಿಸ್ತಾರವಾಗಿದ್ದು, ಬೀದಿ ದೀಪಗಳ ಕೊರತೆ ಎದುರಾಗಿದೆ. ಹೊಸದಾಗಿ ಪುರಸಭೆಯಿಂದಲೇ ಖರೀದಿಸಲು ಅವಕಾಶ ಕೊಡಿ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಅವುಗಳ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
    ಸದಸ್ಯೆ ಕೆ.ಬಿ.ವೀಣಾ ಮಾತನಾಡಿ, ನಮ್ಮ ವಾರ್ಡ್‌ಗೆ ದಿನ ಬಿಟ್ಟು ದಿನ ನೀರು ಕೊಡುತ್ತಿದ್ದಾರೆ. ಅಲ್ಲದೆ ರಾತ್ರಿ 10 ಗಂಟೆ ನಂತರ ನೀರು ಸರಬರಾಜು ಮಾಡಲಾಗುತ್ತಿದ್ದು, ಇದರಿಂದ ಜನರಿಗೆ ಅನಾನುಕೂಲವಾಗುತ್ತಿದೆ. ಇದನ್ನು ಕೂಡಲೆ ಸರಿಪಡಿಸಿ ಎಂದು ಮನವಿ ಮಾಡಿದರು.

    ಸದಸ್ಯ ಕೆ.ಎಲ್.ಜಗದೀಶ್ ಮಾತನಾಡಿ 2ನೇ ವಾರ್ಡ್‌ನಲ್ಲಿ ವೆಟ್‌ವೆಲ್ ನಿರ್ಮಾಣವಾಗಿ 4 ವರ್ಷ ಕಳೆದಿದ್ದರೂ ಸಂಪರ್ಕ ಕಲ್ಪಿಸಿಲ್ಲ. ್ಲ ನಿವಾಸಿಗಳೇ ಯುಜಿಡಿಗೆ ಸಂಪರ್ಕ ಕೊಟ್ಟಿಕೊಂಡಿದ್ದು, ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮಲಿನ ನೀರು ಮೇಲ್ಮುಖವಾಗಿ ರಸ್ತೆಯಲ್ಲೇ ಹರಿಯುತ್ತಿದೆ. ಯುಜಿಡಿ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಪರಿಹರಿಸಿಕೊಡಿ ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಆಡಳಿತಾಧಿಕಾರಿ ಹಾಗೂ ಹುಣಸೂರಿನ ಉಪ ವಿಭಾಗಾಧಿಕಾರಿ ಮೊಹಮದ್ ಹಾರಿಸ್ ಸುಮೈರ್, ಈ ಬಜೆಟ್‌ನಲ್ಲಿ 26.13 ಲಕ್ಷ ರೂ. ಉಳಿತಾಯ ಬಜೆಟ್ ಇದ್ದು, ನೀವೆಲ್ಲ ತೀರ್ಮಾನಿಸಿದರೆ ಪತ್ರಕರ್ತರ ಆರೋಗ್ಯ ನಿಧಿಗೆ ಅನುದಾನ ಕಾಯ್ದಿರಿಸಲಾಗುವುದು. ಉಳಿದ ಸಮಸ್ಯೆಗಳ ನಿವಾಹರಣೆಗೆ ಶೀಘ್ರ ಸಾಮಾನ್ಯ ಸಭೆಯನ್ನು ಕರೆದು ಸೂಕ್ತ ಪರಿಹಾರ ಕಂಡುಕೊಳ್ಳಣ ಎಂದರು. ಈ ಸಭೆಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಪುರಸಭೆಯ ಎಲ್ಲ ಇಂಜಿನಿಯರ್‌ಗಳು, ಸದಸ್ಯರು ಕಡ್ಡಾಯವಾಗಿ ಹಾಜರಿರಬೇಕು ಆಗ ಎಲ್ಲಾ ವಾರ್ಡುಗಳ ಸಮಸ್ಯೆಗೆ ಕಂಡುಕೊಳ್ಳಲು ಸಾದ್ಯ. ಮೊದಲು ನಮ್ಮ ಮಟ್ಟದಲ್ಲಿ ಪರಿಹಾರ ಆಗುವ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳೋಣ ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳಿಗೆ ಮನವಿ ಸಲ್ಲಿಸೋಣ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಸೌಮ್ಯಲೋಕೇಶ್, ಮಿಕ್ಸರ್‌ಶಂಕರ್, ಶಿವುನಾಯಕ್, ಶಂಕರ್‌ಸ್ವಾಮಿ, ಶಾರದನಾಗೇಶ್, ಅಪ್ರೋಜ್ ಉನ್ನೀಸಾ, ವಹಿದಾಬಾನು, ತೋಂಟದಾರ್ಯ, ಇಂಜಿನಿಯರ್ ಕೆ.ಆರ್.ಚಂದ್ರಶೇಖರ್, ಕಂದಾಯಧಿಕಾರಿ ರಮೇಶ್, ರಾಜಶ್ವನಿರೀಕ್ಷ ಪ್ರಭು, ಲೆಕ್ಕಾಧಿಕಾರಿ ಸ್ವಪ್ನ, ಸಿಬ್ಬಂದಿಗಳಾದ ಸುಧಾರಾಣಿ, ಗಣೇಶ್, ಲೋಕೇಶ್, ಲಕ್ಷ್ಮಿ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts