More

    ಸಮ ಸಮಾಜದ ಕನಸು ಕಂಡ ಸಾಂಸ್ಕೃತಿಕ ನಾಯಕ

    ದಾವಣಗೆರೆ : ಯುದ್ಧ ಭೀತಿ, ಅಸಮಾನತೆ, ಜಾತೀಯತೆಯ ಕಾರ್ಮೋಡಗಳು ಕವಿದಿರುವ ಇಂದಿನ ಜಗತ್ತಿಗೆ ‘ಸಾಂಸ್ಕೃತಿಕ ನಾಯಕ’ ಬಸವಣ್ಣ ಅವರ ಆದರ್ಶಗಳು ಪ್ರಸ್ತುತವಾಗಿವೆ. ಸಮ ಸಮಾಜ ನಿರ್ಮಾಣಕ್ಕೆ ಇದೊಂದೇ ನಮ್ಮ ಮುಂದಿರುವ ದಾರಿ.
     ಹರಿಹರದ ಸಿದ್ದೇಶ್ವರ ಪ್ಯಾಲೇಸ್‌ನಲ್ಲಿ ಮಂಗಳವಾರ, ಜಿಲ್ಲಾಮಟ್ಟದ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ‘ಸಾಂಸ್ಕೃತಿಕ ನಾಯಕರಾಗಿ ವಿಶ್ವಗುರು ಬಸವಣ್ಣ’ ಎಂಬ ವಿಷಯದ ಗೋಷ್ಠಿಯಲ್ಲಿ ವ್ಯಕ್ತವಾದ ಅಭಿಪ್ರಾಯವಿದು.
     ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ಯುಕ್ರೇನ್, ರಷ್ಯಾ, ಇಸ್ರೇಲ್ ಮುಂತಾದ ದೇಶಗಳಲ್ಲಿ ಯುದ್ಧ ನಡೆಯುತ್ತಿದೆ. ರಾಷ್ಟ್ರಗಳ ಗಡಿಯನ್ನು ವಿಸ್ತರಿಸಬೇಕೆಂಬ ದಾಹದಿಂದಾಗಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
     ಬಸವಣ್ಣ ಬರುವ ಮೊದಲು ಸಮಾಜದಲ್ಲಿ ಚಾತುರ್ವರ್ಣ ವ್ಯವಸ್ಥೆ ಇತ್ತು. ತಳ ವರ್ಗದವರ ಶೋಷಣೆಯಾಗುತ್ತಿತ್ತು. ಕಾರ್ತಿಕದ ಕತ್ತಲೆಯಲ್ಲಿ ಆಕಾಶ ದೀಪವಾಗಿ ಬಸವಣ್ಣ ಬಂದರು ಎಂಬ ಕವಿ ವಾಣಿಯನ್ನು ನೆನಪಿಸಿದರು.
     ಬಸವ ಜಯಂತಿಯನ್ನು ಮೊದಲು ಆರಂಭಿಸಿದ್ದು ಮಹಾರಾಷ್ಟ್ರ ಸರ್ಕಾರ, ನಂತರ ನಮ್ಮ ಸರ್ಕಾರವೂ ಅನುಸರಿಸಿ, ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಅವರ ಭಾವಚಿತ್ರಗಳನ್ನು ಹಾಕಲು ಆದೇಶಿಸಿತು. ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಈ ಹಿಂದೆಯೇ ಘೋಷಣೆ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
     ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಇಂದಿಗೂ ತಳ ಸಮುದಾಯದವರು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಈ ತಾರತಮ್ಯ ಹೋಗಬೇಕು, ಸಮ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದರು.
     ಇತ್ತೀಚೆಗೆ ದೇವರು ಮತ್ತು ಧರ್ಮದ ಹೆಸರಿನಲ್ಲಿ ಕ್ರೌರ್ಯಗಳು ನಡೆಯುತ್ತಿವೆ. ದೇವರ ಬಗ್ಗೆ ಗೊಂದಲಗಳಿವೆ. ಭಗವಂತನನ್ನೂ ಜಾತಿ, ಧರ್ಮದ ಚೌಕಟ್ಟಿನಲ್ಲಿ ಗುರುತಿಸುವ ಸ್ಥಿತಿಗೆ ಬಂದಿದ್ದೇವೆ ಎಂದು ತಿಳಿಸಿದರು.
     ಕನ್ನಡೇತರರು ನಮ್ಮ ಪ್ರದೇಶವನ್ನು ಆಕ್ರಮಣ ಮಾಡಿಕೊಳ್ಳುತ್ತಿದ್ದು ನಾವು ಜಾಗೃತರಾಗಬೇಕಿದೆ. ನಾಡು, ನುಡಿಗಾಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.
     ಯಲವಟ್ಟಿ ಶ್ರೀ ಗುರುಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಮಾತನಾಡಿ, ಬಸವಣ್ಣ ಸಪ್ತಶೀಲಗಳನ್ನು ಬೋಧಿಸಿದರು. ಸಮಾನತೆಯನ್ನು ಪ್ರತಿಪಾದಿಸಿದರು. ಭಕ್ತಿಯ ಮಾರ್ಗವನ್ನು ತೋರಿದರು. ವಚನಗಳ ಮೂಲಕ ಕನ್ನಡದ ಸಾಮರ್ಥ್ಯವನ್ನು ಹೆಚ್ಚಿಸಿದರು. ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
     ಕನ್ನಡವನ್ನು ಉಳಿಸಿ ಬೆಳೆಸಬೇಕು, ಅದಕ್ಕಾಗಿ ಕನ್ನಡದಲ್ಲೆ ವ್ಯವಹಾರ ಮಾಡಬೇಕು, ಭಾಷೆಯ ಬಗ್ಗೆ ಅಭಿಮಾನ ಹೊಂದಬೇಕು. ಪರಭಾಷೆ ವ್ಯಾಮೋಹವನ್ನು ಬಿಡಬೇಕು. ಕನ್ನಡವನ್ನು ಪ್ರೀತಿಸಬೇಕು ಎಂದು ಹೇಳಿದರು.
     ಎಂ.ಯು. ಚನ್ನಬಸಪ್ಪ ಪ್ರಾಸ್ತಾವಿಕ ಮಾತನಾಡಿದರು. ಸಮ್ಮೇಳನಾಧ್ಯಕ್ಷ ಪ್ರೊ.ಸಿ.ವಿ. ಪಾಟೀಲ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts