More

    ಅವಳಿ ಮಕ್ಕಳಿಗೆ ಉಳಿತಾಯ ಖಾತೆ

    ಅನ್ಸಾರ್ ಇನೋಳಿ ಉಳ್ಳಾಲ
    ಶಾರದಾ ವಿದ್ಯಾಗಣಪತಿ ವಿದ್ಯಾಕೇಂದ್ರದಲ್ಲಿ ಕಲಿಯುತ್ತಿರುವ 17 ಜೋಡಿ ಅವಳಿ ಮಕ್ಕಳಿಗೆ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆಯುವ ಯೋಜನೆಯ ಭಾಗ್ಯ ಲಭಿಸಿದೆ.

    ನೋಂದಣಿ ಕಾರ್ಯಕ್ರಮ ಶುಕ್ರವಾರ ಶಾಲೆಯಲ್ಲಿ ನಡೆಯಿತು. ಈ ಶಾಲೆಯಲ್ಲಿ ಕಳೆದ ವರ್ಷ 11 ಜೋಡಿ ಅವಳಿ ಮಕ್ಕಳಿದ್ದರು. ಈ ಬಗ್ಗೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಈ ವರ್ಷ 17 ಜೋಡಿ ಅವಳಿ ಮಕ್ಕಳು ಕಲಿಯುತ್ತಿದ್ದಾರೆ. ಹೀಗೆ ಅವಳಿ ಮಕ್ಕಳಿಗೆ ಕೆಲವೊಂದು ವಿಶೇಷ ಯೋಜನೆಗಳನ್ನು ಸಂಸ್ಥೆಯ ಸಂಚಾಲಕ ಟಿ.ಜಿ.ರಾಜಾರಾಮ ಭಟ್ ಘೋಷಿಸಿದ್ದಾರೆ. ಆ ಪೈಕಿ ಉಳಿತಾಯ ಖಾತೆ ಯೋಜನೆಯೂ ಒಂದು. ಖಾತೆಯ ಸಂಪೂರ್ಣ ಖರ್ಚನ್ನು ಸಂಸ್ಥೆಯೇ ಭರಿಸಿದೆ. ಎಂಟು ಜೋಡಿ ಅವಳಿ ಮಕ್ಕಳಿಗೆ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ, ಎಂಟು ಜೋಡಿಗೆ ಪ್ರಾವಿಡೆಂಟ್ ಫಂಡ್ ಯೋಜನೆ ಹಾಗೂ ಒಂದು ಜೋಡಿಗೆ ಸುಕನ್ಯಾ ಸಮೃದ್ಧಿ ಯೋಜನೆ ಭಾಗ್ಯ ಕಲ್ಪಿಸಲಾಗಿದೆ.

    ಉಳಿತಾಯ ಖಾತೆಯ ಜತೆ ಲಕ್ಷ್ಮಣ ಫಲದ ಗಿಡಗಳನ್ನೂ ವಿತರಿಸಲಾಯಿತು. ಈ ಗಿಡಗಳನ್ನು ಪಡೆದ ಮಕ್ಕಳ ಮನೆಗೆ ಮುಂದಿನ ವರ್ಷ ಶಾಲಾಡಳಿತ ಮಂಡಳಿ ಭೇಟಿ ನೀಡಿ ಪರಿಶೀಲಿಸಲಿದ್ದು, ಉತ್ತಮವಾಗಿ ಗಿಡ ಬೆಳೆಸಿದ ಮಕ್ಕಳಿಗೆ ಮೊದಲ ಬಹುಮಾನ 1000 ನಗದು, ದ್ವಿತೀಯ ಬಹುಮಾನ 750 ಹಾಗೂ ತೃತೀಯ ಬಹುಮಾನವಾಗಿ 500 ನಗದು ನೀಡುವುದಾಗಿ ಸಂಚಾಲಕರು ಘೋಷಿಸಿದರು.

    ಕಾರ್ಯಕ್ರಮದಲ್ಲಿ ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಅಂಚೆ ವಿಭಾಗದ ಹಿರಿಯ ಮುಖ್ಯಸ್ಥ ಸುಧಾಕರ ಮಲ್ಯ, ಬಂಟ್ವಾಳ ತಾಪಂ ಮಾಜಿ ಸದಸ್ಯ ನವೀನ್ ಪಾದಲ್ಪಾಡಿ, ಅಮ್ಮೆಂಬಳ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನ ಉಪಾಧ್ಯಕ್ಷ ಜಯರಾಮ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲ ಶ್ರೀಹರಿ, ಮಾರುಕಟ್ಟೆ ಪ್ರತಿನಿಧಿ ಸುಭಾಷ್ ಮೊದಲಾದವರು ಉಪಸ್ಥಿತರಿದ್ದರು.

    ಶಿಕ್ಷಕ ಶ್ರೀನಿವಾಸ ಭಟ್ ಸೇರಾಜೆ ಸ್ವಾಗತಿಸಿ, ಅಂಚೆ ಇಲಾಖೆಯ ಉಪಾಧೀಕ್ಷಕ ಪಿ.ದಿನೇಶ್ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಚಂದ್ರಕುಮಾರ್ ವಂದಿಸಿದರು. ದಯಾನಂದ ಕತ್ತಲ್‌ಸಾರ್ ಕಾರ್ಯಕ್ರಮ ನಿರೂಪಿಸಿದರು.

    ವಿಜಯವಾಣಿಗೆ ಶ್ಲಾಘನೆ

    ಶಾಲೆಯಲ್ಲಿ ಅವಳಿ ಜೋಡಿಗಳು ಕಲಿಯುತ್ತಿರುವ ಬಗ್ಗೆ ಮೊದಲ ಬಾರಿ ಸಚಿತ್ರ ವರದಿ ಪ್ರಕಟಿಸಿದ ವಿಜಯವಾಣಿ ಪತ್ರಿಕೆಯ ವರದಿಯನ್ನು ಈ ವೇಳೆ ರಾಜಾರಾಮ ಭಟ್ ನೆನಪಿಸಿಕೊಂಡರು. ಕಳೆದ ವರ್ಷ ವಿಜಯವಾಣಿ ಪತ್ರಿಕೆಯ ಮೂಲಕವೇ ನಮ್ಮ ಶಾಲೆಯ ಅವಳಿ ಮಕ್ಕಳ ವಿಷಯ ಪ್ರಕಟವಾಗಿ ರಾಷ್ಟ್ರಮಟ್ಟದ ಸುದ್ದಿಯಾಗಿ ವಿವಿಧ ರಾಜ್ಯಗಳ ಪತ್ರಕರ್ತರು ಶಾಲೆಗೆ ಬಂದಿದ್ದರು. ಈಗ ಅಂಚೆ ಇಲಾಖೆ ಅಧಿಕಾರಿಗಳು ಶಾಲೆಗೆ ಬಂದು ವಿವಿಧ ಯೋಜನೆಗಳನ್ನು ಘೋಷಿಸಿದ್ದಾರೆ. ಅವಳು ಮಕ್ಕಳು ನಮ್ಮ ಶಾಲೆಯ ಬ್ರಾಂಡ್‌ಗಳು ಎಂದು ತಿಳಿಸಿದರು.

    ಭ್ರಷ್ಟಾಚಾರ ಇಲ್ಲದ, ಒಂದು ಕಾಲದಲ್ಲಿ ಪ್ರಭಾವಿಯಾಗಿದ್ದ ಅಂಚೆ ಇಲಾಖೆ ಇಂದು ಅಸ್ತಿತ್ವಕ್ಕೆ ಹೋರಾಡುತ್ತಿದೆ. ಇಲಾಖೆಯಲ್ಲಿ ವಿವಿಧ ಯೋಜನೆಗಳಿದ್ದು ಶಾಲೆಯಲ್ಲಿ ಪರಿಚಯಿಸುವ ಕಾರ್ಯ ನಡೆದಿದೆ. ಹಿಂದೆ ಶಾಲೆಯ ಮಕ್ಕಳು ಪೊಲೀಸ್ ಠಾಣೆ, ಮೈಸೂರು, ಬೆಂಗಳೂರು ಹೀಗೆ ಭೇಟಿ ನೀಡುತ್ತಿದ್ದರೆ ಮುಂದೆ ಅಂಚೆ ಇಲಾಖೆಗೂ ಭೇಟಿ ನೀಡಲಿದ್ದಾರೆ.

    -ಟಿ.ಜಿ.ರಾಜಾರಾಮ ಭಟ್
    ಸಂಚಾಲಕ, ಶಾರದಾ ಗಣಪತಿ ವಿದ್ಯಾಕೇಂದ್ರ

    ಅಂಚೆ ಇಲಾಖೆಯ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕು ಎನ್ನುವ ನೆಲೆಯಲ್ಲಿ ಮಂಗಳೂರು ಅಂಚೆ ವಿಭಾಗ 22 ಖಾತೆ ತೆರೆದು ಪ್ರಥಮ ಸ್ಥಾನದಲ್ಲಿದೆ. ಸಚ್ಚರಿಪೇಟೆ ಮತ್ತು ಕಿನ್ನಿಗೋಳಿಯಲ್ಲಿ ಐದು ತಲೆಮಾರಿನ ಸದಸ್ಯರಿಗೆ ಯೋಜನೆ ವಿತರಿಸಲಾಗಿದೆ. 17 ಜೋಡಿ ಅವಳಿ ಮಕ್ಕಳು ಅಂಚೆ ಇಲಾಖೆಯ ಬ್ರಾೃಂಡ್ ಅಂಬಾಸಿಡರ್‌ಗಳು.

    -ಸುಧಾಕರ ಮಲ್ಯ
    ಹಿರಿಯ ಮುಖ್ಯಸ್ಥ, ಮಂಗಳೂರು ಅಂಚೆ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts