More

    ತ್ರಾಸಿ ಬೀಚ್ ಪ್ರದೇಶದಲ್ಲಿ ಗಾಳಿಪಟ ಉತ್ಸವ, ಮಕ್ಕಳ ಹಬ್ಬ

    ಗಂಗೊಳ್ಳಿ: ಪಂಚಾಯತ್ ರಾಜ್ ಇಲಾಖೆ ತ್ರಾಸಿ ಗ್ರಾಪಂನ್ನು ಮಕ್ಕಳ ಸ್ನೇಹಿ ಪಂಚಾಯಿತಿಯಾಗಿ ಆಯ್ಕೆ ಮಾಡಿರುವುದು ಸಂತಸದ ಜತೆ ಜವಾಬ್ದಾರಿ ಹೆಚ್ಚಿಸಿದೆ. ಪ್ರತಿ ವಾರ್ಡ್‌ವಾರು ಮಕ್ಕಳ ಸಭೆ ನಡೆಸಿ, ಸಮಸ್ಯೆ ಆಲಿಸಿ, ಪರಿಹರಿಸುವ ಪ್ರಯತ್ನ ಮಾಡಿದ್ದೇವೆ ಎಂದು ತ್ರಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಿಥುನ್ ದೇವಾಡಿಗ ಹೇಳಿದರು.

    ಜಿಪಂ, ಕುಂದಾಪುರ ತಾಪಂ, ತ್ರಾಸಿ ಗ್ರಾಪಂ ಆಶ್ರಯದಲ್ಲಿ, ನಮ್ಮ ಭೂಮಿ ಸಂಸ್ಥೆ ಸಹಕಾರದೊಂದಿಗೆ ತ್ರಾಸಿ ಬೀಚ್ ಪ್ರದೇಶದಲ್ಲಿ ಶುಕ್ರವಾರ ನಡೆದ ಮಕ್ಕಳ ಹಬ್ಬ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ನಮ್ಮ ಭೂಮಿ ಸಂಸ್ಥೆಯ ಸಂಯೋಜಕ ಶ್ರೀನಿವಾಸ ಗಾಣಿಗ ಮಾತನಾಡಿ, ರಾಜ್ಯದ 6022 ಗ್ರಾಪಂಗಳ ಪೈಕಿ ಮಕ್ಕಳಿಗೆ ಸ್ಪಂದಿಸುವ 100 ಗ್ರಾಪಂಗಳ ಪೈಕಿ ತ್ರಾಸಿ ಗ್ರಾಪಂ ಒಂದಾಗಿದೆ ಎಂದರು.

    ಗ್ರಾಪಂ ಉಪಾಧ್ಯಕ್ಷೆ ಹೇಮಾ, ಸದಸ್ಯರಾದ ಗೀತಾ ದೇವಾಡಿಗ, ನಾಗರತ್ನ ಶೆಟ್ಟಿಗಾರ್, ರಾಜು ಮೆಂಡನ್, ರೆನ್ಸಮ್ ಪಿರೇರಾ, ವಿಜಯ ಪೂಜಾರಿ, ಸಿಆರ್‌ಪಿ ಯೋಗೀಶ್, ಅಂಗನವಾಡಿ ಮೇಲ್ವಿಚಾರಕಿ ರೇಖಾ, ಮೊವಾಡಿ ಶಾಲೆಯ ಮುಖ್ಯ ಶಿಕ್ಷಕಿ ಶರಾವತಿ, ಗುಜ್ಜಾಡಿ ಭಾಸ್ಕರ ಪೈ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಬಬಿತಾ ರಾಣಿ, ಮಕ್ಕಳ ರಕ್ಷಣಾ ಘಟಕದ ಮಹೇಶ್, ನಮ್ಮ ಭೂಮಿ ಸಂಸ್ಥೆಯ ಅನಿತಾ, ಸುಹಾಸ್ ಸಂಸ್ಥೆಯ ಪ್ರಮುಖರು, ಎಸ್‌ಆರ್‌ಎಲ್‌ಎಂ ಘಟಕ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ‌್ಯಕರ್ತೆಯರು, ಗ್ರಾಪಂ ಸಿಬ್ಬಂದಿ, ಶಿಕ್ಷಕರು, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

    ಪಿಡಿಒ ಶೋಭಾ ಸ್ವಾಗತಿಸಿದರು. ಶಿಕ್ಷಕಿ ಭಾಗೀರಥಿ ಕಾರ್ಯಕ್ರಮ ನಿರೂಪಿಸಿದರು. ತ್ರಾಸಿ ಗ್ರಾಪಂ ಲೆಕ್ಕಾಧಿಕಾರಿ ಶಿವಾನಂದ ಅನುಪಾಲನಾ ವರದಿ ಮಂಡಿಸಿದರು.

    ತ್ರಾಸಿ ಬೀಚ್ ಪ್ರದೇಶದಲ್ಲಿ ಗಾಳಿಪಟ ಉತ್ಸವ, ಮಕ್ಕಳ ಹಬ್ಬ

    ಗಾಳಿಪಟ ಉತ್ಸವ

    ಕಾರ್ಯಕ್ರಮ ಆರಂಭಕ್ಕೂ ಮುನ್ನ ವಿವಿಧ ಶಾಲೆಗಳ ಮಕ್ಕಳು ತ್ರಾಸಿ ಕಡಲ ತೀರದಲ್ಲಿ ಗಾಳಿಪಟ ಉತ್ಸವ ನಡೆಸಿ ಸಂಭ್ರಮಿಸಿದರು. ವಿವಿಧ ಶಾಲೆ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಹಾಗೂ ಇನ್ನಿತರ ವಸ್ತು ಪ್ರದರ್ಶನಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಕ್ಕಳ ಸಭೆಯಲ್ಲಿ ಮೊವಾಡಿ, ಗುಜ್ಜಾಡಿ ಶಾಲೆಗಳ ಮಕ್ಕಳು ತಮ್ಮ ಭಾಗದ ಸಮಸ್ಯೆಗಳು, ಅಹವಾಲುಗಳನ್ನು ಪ್ರಸ್ತಾಪಿಸಿದರು.

    ತ್ರಾಸಿ ಬೀಚ್ ಪ್ರದೇಶದಲ್ಲಿ ಗಾಳಿಪಟ ಉತ್ಸವ, ಮಕ್ಕಳ ಹಬ್ಬ

    ಬಸ್ಸಿಲ್ಲದೆ ಸಮಸ್ಯೆ

    ಶಾಲೆಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆ ದುರಸ್ತಿ ಮಾಡಿಕೊಡಿ ಎಂದು ಎಂ.ಭಾಸ್ಕರ ಪೈ ಶಾಲೆಯ ಶರತ್ ಹೇಳಿದರು. ಮೊವಾಡಿಯಿಂದ ತ್ರಾಸಿಗೆ ಬರಲು ಬಸ್ಸಿಲ್ಲದೆ ಶಾಲೆಗೆ ಬರಲು ಸಮಸ್ಯೆಯಾಗುತ್ತಿದೆ. ಗಂಡು ಮಕ್ಕಳು ಬೈಕ್‌ನಲ್ಲಿಯಾದರೂ ಹೋಗುತ್ತಾರೆ. ನಮಗೆ ಕಷ್ಟ ಆಗುತ್ತಿದೆ ಎಂದು ವಿದ್ಯಾರ್ಥಿನಿಯರಾದ ರಮ್ಯಾ, ಸಮೀಕ್ಷಾ ಪ್ರಸ್ತಾಪಿಸಿದರು.

    ತ್ರಾಸಿ ಬೀಚ್ ಪ್ರದೇಶದಲ್ಲಿ ಗಾಳಿಪಟ ಉತ್ಸವ, ಮಕ್ಕಳ ಹಬ್ಬ

    ತಾಯಿಗೆ ವಾಕರ್ ಬೇಕು

    ಮೊವಾಡಿ ಉದ್ರುಮನೆ ರಸ್ತೆಗೆ ದಾರಿ ದೀಪವಿಲ್ಲದೆ ಸಮಸ್ಯೆಯಾಗುತ್ತಿದೆ ಎಂದು ಅಮೃತಾ ಹೇಳಿದರು. ಶಾಲೆಯಲ್ಲಿ ನೀರಿನ ಫಿಲ್ಟರ್ ಇದ್ದರೂ, ಕರೆಂಟ್ ಇಲ್ಲದಾಗ ಸಮಸ್ಯೆಯಾಗುತ್ತಿದೆ ಎಂದು ಪ್ರಗತಿ ತಿಳಿಸಿದರು. ತಂದೆ ಇಲ್ಲ, ತಾಯಿಗೆ ಅನಾರೋಗ್ಯವಿದ್ದು, ನಡೆಯಲು ವಾಕರ್ ಬೇಕು ಎಂದು ಆರುಷ್ ಮನವಿ ಮಾಡಿಕೊಂಡರು. ಅಂಗನವಾಡಿಗೆ ಆಟದ ಪರಿಕರ, ಪೌಷ್ಟಿಕ ತೋಟ, ಇಂಟರ್‌ಲಾಕ್ ಬೇಕು ಎಂದು ಅಂಗನವಾಡಿ ಪುಟಾಣಿ ಸಂಸ್ಕೃತಿ ಗಮನ ಸೆಳೆದರು. ಶಾಲೆಯ ತರಗತಿ ಕೋಣೆಗಳು ಬಿರುಕು ಬಿಟ್ಟಿದ್ದು, ಗೋಡೆಗಳ ಪೈಂಟ್ ಉದುರಿ ಬೀಳುತ್ತಿದೆ. ಇದನ್ನು ಸರಿಪಡಿಸಬೇಕೆಂದು ವಿದ್ಯಾರ್ಥಿಯೊಬ್ಬ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts