More

    ಮಹಿಳಾ ಮಣಿಗಳ ನಡುವೆ ಪೈಪೋಟಿ ?

    ದಾವಣಗೆರೆ : ಕಾಂಗ್ರೆಸ್‌ನಿಂದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ದೊರೆಯುವುದು ಬಹುತೇಕ ಖಚಿತವಾಗಿದ್ದು ಇದರೊಂದಿಗೆ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರು ಮಹಿಳಾ ಮಣಿಗಳ ನಡುವೆ ಪೈಪೋಟಿ ಏರ್ಪಡುವುದು ಖಾತ್ರಿಯಾದಂತಾಗಿದೆ.
     ದೆಹಲಿಯಲ್ಲಿ ಮಂಗಳವಾರ ನಡೆದ ಸಿಇಸಿ ಸಭೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಹೆಸರು ಬಹುತೇಕ ಅಂತಿಮಗೊಂಡಿದೆ. ಬುಧವಾರ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
     ಬಿಜೆಪಿಯಿಂದ ಹಾಲಿ ಸಂಸದರ ಪತ್ನಿಗೆ ಟಿಕೆಟ್ ನೀಡಲಾಗಿದ್ದು ಅವರು ಈಗಾಗಲೇ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್‌ನ 2ನೇ ಪಟ್ಟಿಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸುವ ಮೂಲಕ ಕಾಂಗ್ರೆಸ್ ಪ್ರತಿತಂತ್ರ ಹೆಣೆದಿದೆ.
     ಪ್ರಭಾ ಮಲ್ಲಿಕಾರ್ಜುನ್ ಎಸ್.ಎಸ್. ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿಯಾಗಿದ್ದು ಕ್ಷೇತ್ರದಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುತ್ತ ಬಂದಿದ್ದಾರೆ. ಎಲ್ಲ ತಾಲೂಕುಗಳಲ್ಲಿ ಸುತ್ತಾಡಿ ಸಮಾಜಸೇವೆಯ ಮೂಲಕ ಜನರಿಗೆ ಪರಿಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ. ಪ್ರಭಾ ಅಭ್ಯರ್ಥಿಯಾಗಬಹುದು ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಅವರು ಮಾತ್ರ ಎಲ್ಲಿಯೂ ಹೇಳಿಕೊಂಡಿರಲಿಲ್ಲ.
     ಕಳೆದ 3 ದಶಕಗಳ ಇತಿಹಾಸವನ್ನು ಅವಲೋಕಿಸಿದಾಗ (2019 ರಲ್ಲಿ ಹೊರತುಪಡಿಸಿ) ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶಾಮನೂರು ಮತ್ತು ಭೀಮಸಮುದ್ರ ಮನೆತನಗಳ ನಡುವೆಯೆ ಪೈಪೋಟಿ ನಡೆಯುತ್ತ ಬಂದಿದೆ.
     ಕಾಂಗ್ರೆಸ್‌ನಿಂದ ಡಾ. ಶಾಮನೂರು ಶಿವಶಂಕರಪ್ಪ 90 ರ ದಶಕದಲ್ಲಿ ಸ್ಪರ್ಧಿಸಿ ಒಂದು ಬಾರಿ ಆಯ್ಕೆಯಾಗಿದ್ದರು. 2004, 2009 ಮತ್ತು 2014 ರಲ್ಲಿ ನಡೆದ ಚುನಾವಣೆಗಳಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಸತತ ಸೋಲು ಅನುಭವಿಸಿದ್ದರು. ಕಳೆದ ಬಾರಿ (2019) ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಸ್ಪರ್ಧಿಸಿ ಪರಾಭವಗೊಂಡಿದ್ದರು.
     ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣದಿಂದ ಡಾ. ಶಾಮನೂರು ಶಿವಶಂಕರಪ್ಪ ಅವರು ಗೆದ್ದು ಶಾಸಕರಾದರು. ದಾವಣಗೆರೆ ಉತ್ತರದಿಂದ ಆಯ್ಕೆಯಾದ ಎಸ್.ಎಸ್. ಮಲ್ಲಿಕಾರ್ಜುನ್ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾಗಿದ್ದಾರೆ. ಹಾಗಾಗಿ ಪ್ರಭಾ ಅವರ ಹೆಸರು ಮುಂಚೂಣಿಗೆ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts