

ಬೆಂಗಳೂರು: ಸದಭಿರುಚಿ ಧಾರಾವಾಹಿಗಳ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಜೀ ಕನ್ನಡದಲ್ಲಿ ‘ಗೌರಿಪುತ್ರ’ ಎಂಬ ಹೊಸ ಧಾರಾವಾಹಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಇದೇ 16 ರಿಂದ ಈ ಹೊಸ ಧಾರಾವಾಹಿ ಪ್ರಾರಂಭವಾಗಲಿದ್ದು, ಪ್ರತಿ ದಿನ ಸಂಜೆ 7ಕ್ಕೆ ವಾಹಿನಿಯಲ್ಲಿ ಪ್ರಸಾರವಾಗಲಿದೆ. ರಾಮ್ ಜೀ ನಿರ್ದೇಶನದ ಈ ಧಾರಾವಾಹಿಯ ಮೊದಲ ಸಂಚಿಕೆಯ ಪ್ರೀಮಿಯರ್ ಇತ್ತೀಚೆಗೆ ಆಯೋಜಿಸಲಾಗಿತ್ತು. ತಾಯಿಗೆ ತಪ್ಪಿ ಹೋದ ತವರನ್ನು ಕೊಡಿಸುವುದಕ್ಕೆ ಹೋರಾಡುವ ಮಗನ ಕಥೆ ಇದಾಗಿದೆ. ನಟಿ ಅನುಪ್ರಭಾಕರ್ ಅಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದು, ರಿತ್ವಿಕ್ ಮಗನಾಗಿ ನಟಿಸುತ್ತಿದ್ದಾರೆ. ರಿತ್ವಿಕ್ ಜತೆ ಮಹತಿ ಭಟ್, ಧೃತಿ, ಹಿರಿಯ ನಟ ರಮೇಶ್ ಭಟ್, ರಾಜೇಂದ್ರ ಕಾರಂತ್ ಕಲಾಬಳಗದಲ್ಲಿದ್ದಾರೆ. ಬಿಜಿನೆಸ್ ಹೆಡ್ ದೀಪಕ್ ಶ್ರೀರಾಮಲು, ‘ಕನ್ನಡ ಕಿರುತೆರೆ ಲೋಕದಲ್ಲಿ ಇದೇ ಮೊದಲ ಬಾರಿಗೆ ಧಾರಾವಾಹಿಯೊಂದರ ಪ್ರೀಮಿಯರ್ ಆಯೋಜನೆಯಾಗಿದೆ. ಈ ವರ್ಷ ಜೀ ಕನ್ನಡದಲ್ಲಿ ಐದು ಹೊಸ ಧಾರಾವಾಹಿಗಳು ಪ್ರಸಾರವಾಗಿವೆ. ಈ ಮೊದಲು ಸಂಜೆ 7ಕ್ಕೆ ‘ಅಮೃತಧಾರೆ’ ಪ್ರಸಾರವಾಗುತ್ತಿತ್ತು. ಆ ಧಾರಾವಾಹಿಯ ಜಾಗ ತುಂಬುವಂತಹ ಕಥೆ ಹುಡುಕಾಟದಲ್ಲಿರುವಾಗ ನಮಗೆ ‘ಗೌರಿಪುತ್ರ’ ಕಥೆ ಸಿಕ್ಕಿತು. ಅತಿ ಬೇಗ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಮುಗಿದು ಶೂಟಿಂಗ್ ಆರಂಭವಾಯಿತು. ಇದೀಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.