Scam 2010 - ಹನ್ಸಲ್​ ಹೊಸ ಸ್ಕ್ಯಾಮ್​

Scam 2010
Scam 2010
Published on
Scam 2010 -
ನೈಜ ಘಟನೆಯಾಧಾರಿತ ಸಿನಿಮಾ, ವೆಬ್​ಸರಣಿಗಳ ಮೂಲಕವೇ ಬಾಲಿವುಡ್​ನಲ್ಲಿ ಛಾಪು ಮೂಡಿಸಿರುವ ಹೆಗ್ಗಳಿಕೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಹನ್ಸಲ್​ ಮೆಹ್ತಾಗೆ ಸಲ್ಲುತ್ತದೆ. "ಶಾಹಿದ್​', "ಅಲಿಘಡ್​', "ಒಮೆರ್ಟಾ' ಚಿತ್ರಗಳು ಸೇರಿ "ಗಾಂಧಿ', "ಸ್ಕೂಪ್​' ಸರಣಿಗಳನ್ನು ನಿರ್ದೇಶಿಸಿದ್ದಾರೆ. ಇಂತಹ ಹನ್ಸಲ್​ ಭಾರತದ ಸ್ಟಾಕ್​ ಮಾರ್ಕೆಟ್​ನಲ್ಲಿ ನಡೆದ ಮಹಾವಂಚನೆಯ ಕುರಿತ "ಸ್ಕ್ಯಾಮ್​​ 1992: ದ ಹರ್ಷದ್​ ಮೆಹ್ತಾ ಸ್ಟೋರಿ' ಸರಣಿಯ ಮೂಲಕ 2020ರಲ್ಲಿ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ವಂಚನೆ ಪ್ರಕರಣಗಳ ಬೆನ್ನು ಹತ್ತಿದರು. "ಸ್ಕ್ಯಾಮ್​​ ​1992'ಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಂತರ 2023ರಲ್ಲಿ "ಸ್ಕ್ಯಾಮ್​​ 2003: ದ ತೆಲಗಿ ಸ್ಟೋರಿ' ಮೂಲಕ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್​ ಕರೀಮ್​ ತೆಲಗಿ ಕುರಿತ ಸರಣಿಯ ಶೋರನ್ನರ್​ ಆಗಿದ್ದರು. ಇದೀಗ ಮತ್ತೊಂದು ಹೊಸ ಸ್ಕ್ಯಾಮ್​​ ​ಜತೆ ಹನ್ಸಲ್​ ವಾಪಸ್ಸಾಗಿದ್ದಾರೆ. ಹೆಸರು "ಸ್ಕ್ಯಾಮ್​​ ​2010'. ಪೋಸ್ಟರ್​ ಮೂಲಕ ಶೂಟಿಂಗ್​ ಪ್ರಾರಂಭಿಸಿರುವ ಬಗ್ಗೆ ಮಾಹಿತಿ ನೀಡಿರುವ ಹನ್ಸಲ್​ ಈ ಬಾರಿ ಸಹಾರಾ ಗ್ರೂಪ್​ನ ಸುಬ್ರತ ರಾಯ್​ ಕಥೆ ಹೇಳಲು ಮುಂದಾಗಿದ್ದಾರೆ. ತಮಲ್​ ಬಂಡ್ಯೋಪಾಧ್ಯಾಯ್​ರ "ಸಹಾರಾ : ದ ಅನ್​ಟೋಲ್ಡ್​ ಸ್ಟೋರಿ' ಪುಸ್ತಕವನ್ನು ಆಧರಿಸಿ, ಈ ಸರಣಿಯನ್ನು ನಿರ್ಮಿಸಲಾಗುತ್ತಿದೆ. "ದೃಶ್ಯಂ 3', "ದೇವ' ಸೇರಿ ಕೆಲ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿರುವ ಸಿದ್ಧಾರ್ಥ್​ ಬೊಡ್ಕೆ, ಸುಬ್ರತ ಪಾತ್ರದಲ್ಲಿ ನಟಿಸುತ್ತಿದ್ದು, ಕೃತಿಕಾ ಸಿಂಗ್​, ಮೂನ್​ ಬ್ಯಾನರ್ಜಿ ತಾರಾಗಣದಲ್ಲಿದ್ದಾರೆ.

ಯಾರು ಸುಬ್ರತ ರಾಯ್​?

ಪಶ್ಚಿಮ ಬಂಗಾಳ ಮೂಲಕ ಸುಬ್ರತ ರಾಯ್​, 2000ರ ದಶಕದಲ್ಲಿ 5000ಕ್ಕೂ ಹೆಚ್ಚು ಕಚೇರಿಗಳು, 12 ಲಕ್ಷಕ್ಕೂ ಅಧಿಕ ಸಿಬ್ಬಂದಿ ಇದ್ದ ಸಹಾರಾ ಗ್ರೂಪ್​, ಭಾರತೀಯ ರೈಲ್ವೇ ಬಳಿಕ ಅತಿಹೆಚ್ಚು ಸಿಬ್ಬಂದಿ ಹೊಂದಿರುವ ಕಂಪನಿ ಎನಿಸಿಕೊಂಡಿತ್ತು. ಹೀಗೆ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿದ್ದ ಸುಬ್ರತರನ್ನು ಜನ ಸಹಾರಾಶ್ರೀ ಎಂದು ಕರೆಯುತ್ತಿದ್ದರು. ಜತೆಗೆ 2001ರಿಂದ 2013ರವರೆಗೆ ಭಾರತ ಕ್ರಿಕೆಟ್​ ತಂಡಕ್ಕೆ ಪ್ರಾಯೋಜಕತ್ವ ನೀಡಿತ್ತು. ಆದರೆ, ₹24 ಸಾವಿರ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರತ ಬಂಧಿತರಾದರು. ನಂತರ ಬೇಲ್​ ಪಡೆದು ಹೊರಬಂದರೂ ಹಲವು ವರ್ಷಗಳ ಕಾನೂನು ಸಮರದ ನಡುವೆ 2023ರಲ್ಲಿ ವಿಧಿವಶರಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net