ಸೆ. 6ರಂದು ಬಿಗ್​ಬಾಸ್​ ಸೀಸನ್​ 13 ಆರಂಭವಾಗುತ್ತಾ? ಅಚ್ಚರಿ ಉತ್ತರ ನೀಡಿದ ಸಚಿವ ರಾಮಲಿಂಗಾರೆಡ್ಡಿ!

biggbosskannada
biggbosskannada
Published on

ಪ್ರಮುಖ ಮುಖ್ಯಾಂಶಗಳು

  • ಸೆಪ್ಟೆಂಬರ್ 6 ರಂದು ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭವಾಗುವುದರ ಬಗ್ಗೆ ಮೂಡಿರುವ ಅನುಮಾನ
  • ಶೋ ಆರಂಭಿಸಲು ಯಾವುದೇ ಅನುಮತಿ ಅಥವಾ ಅರ್ಜಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಬೆಂಗಳೂರು ದಕ್ಷಿಣ ಡಿಸಿ ಯಶವಂತ್ ಗುರುಕರ್
  • ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅಗತ್ಯವಿರುವ ಅಧಿಕೃತ ಅನುಮತಿ ಪಡೆಯದ ಜಾಲಿವುಡ್ ಸ್ಟುಡಿಯೋ ಆಡಳಿತ ಮಂಡಳಿ
  • ಹಸಿರು ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಬಾರಿಯ ಶೂಟಿಂಗ್ ಗೆ ಸರ್ಕಾರದ ಕಡೆಯಿಂದ ಆಕ್ಷೇಪಣೆ
ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋ ಆರಂಭಕ್ಕೂ ಮುನ್ನ ಹಲವು ವಿಘ್ನಗಳು ಎದುರಾಗುತ್ತಿವೆ. ಶೋ ಆರಂಭಕ್ಕೆ ಅನುಮತಿ ಪಡೆಯುವ ಸಂಬಂಧಿಸಿದ ಇಲಾಖೆಗಳಿಂದ ಸೂಕ್ತ ಅನುಮತಿ ಪಡೆಯದ ಕಾರಣ ಕಳೆದ ವರ್ಷ ಶೋ ಅರ್ಧಕ್ಕೆ ಸ್ಥಗಿತ ಆಗಿತ್ತು. ಈ ವರ್ಷ ಕೂಡ ಅದೇ ರೀತಿಯಾಗುವ ಸಾಧ್ಯತೆ ಇದೆ. ಬಿಗ್ ಬಾಸ್  ಶೋ ಅನುಮತಿಗಾಗಿ ಯಾವುದೇ ಅರ್ಜಿ ಬಂದಿಲ್ಲ ಎಂದು ಬೆಂಗಳೂರು ದಕ್ಷಿಣ ಡಿಸಿ ಯಶವಂತ್ ಗುರುಕರ್ ಅವರು ಹೇಳಿಕೆ ನೀಡಿದ್ದಾರೆ. ಆದ್ದರಿಂದ ನಿಗದಿತ ಸಮಯದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋ ಆರಂಭ ಆಗುತ್ತಾ ಎಂಬ ಅನುಮಾನ ಶುರುವಾಗಿದೆ.
ಜಾಲಿವುಡ್​ನವರು ಮಾಲಿನ್ಯ ‌ನಿಯಂತ್ರಣ ಮಂಡಳಿಯಲ್ಲಿ ಕನ್ಸೆಂಟ್ ಫಾರ್ ಎಸ್ಟಾಬ್ಲಿಷ್‌ಮೆಂಟ್​ಗೆ ಅನುಮತಿ ಪಡೆದಿದ್ದಾರೆ. ಅಪ್ರೂವಲ್ ಆಗುವುದಕ್ಕೆ ಬೋರ್ಡ್​​ನಲ್ಲಿ ಪೆಂಡಿಂಗ್ ಇದೆ. ಪರಿಸರ ಇಲಾಖೆ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಚನೆಯಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಶೋ ನಡೆಸಲು ಅನುಮತಿಗೆ ಯಾವುದೇ ಅರ್ಜಿ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಅರ್ಜಿಯಲ್ಲಿ ನೀಡಿರುವ ಮಾಹಿತಿಯ ಆಧಾರದಲ್ಲಿ ಪರಿಶೀಲನೆ ಮಾಡುತ್ತೇವೆ. ಅರ್ಜಿಯಲ್ಲಿರುವ ಅಂಶದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಬಳಿಕ ಅನುಮತಿ ನೀಡುವ ಕುರಿತು ತೀರ್ಮಾನ ಮಾಡುತ್ತೇವೆ. ಬಿಗ್‌ಬಾಸ್ ಶೋಗೆ ಅವಕಾಶ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ.
‘ಜಿಲ್ಲಾಡಳಿತಕ್ಕೆ ಯಾವುದೇ ರೀತಿಯ ಅಪ್ಲಿಕೇಷನ್ ಬಂದಿಲ್ಲ. ಅರ್ಜಿ ಬಂದ ಬಳಿಕ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ’ ಎಂದು ಯಶವಂತ್ ಗುರುಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸೆಪ್ಟೆಂಬರ್ 6ರಂದು ಶೋ ಆರಂಭಿಸುವುದಾಗಿ ‘ಕಲರ್ಸ್ ವಾಹಿನಿ’ ಈಗಾಗಲೇ ಘೋಷಣೆ ಮಾಡಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ವರ್ಷನ್ ಬಿಗ್ ಬಾಸ್ ಕೂಡ ಅದೇ ದಿನ ಆರಂಭ ಆಗಬೇಕಿದೆ. ಆದರೆ ಕನ್ನಡದ ಬಿಗ್ ಬಾಸ್ ಆಯೋಜಕರು ಅನುಮತಿ ಪಡೆಯದೇ ಇರುವುದು ಈಗ ತಿಳಿದುಬಂದಿದೆ.
ಪ್ರತಿ ಬಾರಿಯಂತೆ ಈ ಸಲವೂ ಬಿಗ್ ಬಾಸ್ ಹೌಸ್ ಅನ್ನು ಬೆಂಗಳೂರು ಹೊರವಲಯದ ಬಿಡದಿ ಸಮೀಪವಿರುವ 'ಜಾಲಿವುಡ್ ಸ್ಟುಡಿಯೋ'ದಲ್ಲಿ ನಿರ್ಮಿಸಲಾಗಿದೆ. ಆದರೆ ಸ್ಟುಡಿಯೋ ಆಡಳಿತ ಮಂಡಳಿಯು ಈ ಬಾರಿಯ ಶೂಟಿಂಗ್‌ಗಾಗಿ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅಗತ್ಯವಿರುವ ಅಧಿಕೃತ ಅನುಮತಿಯನ್ನು ಪಡೆದುಕೊಂಡಿಲ್ಲ ಎಂಬ ಸಂಗತಿ ಈಗ ಬಹಿರಂಗವಾಗಿದೆ. ಕೇವಲ ಅನುಮತಿ ಮಾತ್ರವಲ್ಲದೆ, ಹಿಂದಿನ ಸೀಸನ್‌ನ ಬಾಕಿ ದಂಡದ ಮೊತ್ತವನ್ನು ಕೂಡ ಇನ್ನೂ ಪಾವತಿಸಿಲ್ಲ ಎಂಬುದು ಸರ್ಕಾರದ ಆಕ್ಷೇಪಕ್ಕೆ ಮುಖ್ಯ ಕಾರಣವಾಗಿದೆ.
ಪರಿಸರ ರಕ್ಷಣೆಯ ನಿಯಮಗಳ ಪ್ರಕಾರ ತ್ಯಾಜ್ಯ ನೀರು ಶುದ್ಧೀಕರಣ ಘಟಕ (STP) ಅಳವಡಿಕೆ ಹಾಗೂ ಸಂಸ್ಕರಿಸಿದ ನೀರಿನ ಮರುಬಳಕೆ ಕಡ್ಡಾಯವಾಗಿದ್ದರೂ, ಅಲ್ಲಿ ಇದರ ಸಮರ್ಪಕ ನಿರ್ವಹಣೆ ಆಗಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ. ಹಸಿರು ನಿಯಮಗಳನ್ನು ಗಾಳಿಗೆ ತೂರಿ ನಡೆಸುವ ಇಂತಹ ಚಟುವಟಿಕೆಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದು, ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವವರೆಗೆ ಯಾವುದೇ ವಿನಾಯಿತಿ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಕಳೆದ ಸೀಸನ್ ಸಂದರ್ಭದಲ್ಲೂ ಇದೇ ರೀತಿಯ ಕಾನೂನು ತೊಡಕುಗಳು ಮತ್ತು ಪರಿಸರ ಉಲ್ಲಂಘನೆಯ ಗೊಂದಲಗಳು ಸೃಷ್ಟಿಯಾಗಿ ಬಿಗ್ ಬಾಸ್ ತಂಡಕ್ಕೆ ಸಂಕಷ್ಟ ತಂದೊಡ್ಡಿದ್ದವು. ಈಗ ಮತ್ತೊಮ್ಮೆ ಅದೇ ಹಳೇ ಸಮಸ್ಯೆ ಮರುಕಳಿಸಿರುವುದರಿಂದ, ಕಲರ್ಸ್ ಕನ್ನಡ ವಾಹಿನಿ ಹಾಗೂ ಜಾಲಿವುಡ್ ನಿರ್ವಹಣಾ ಮಂಡಳಿಯು ತರಾತುರಿಯಲ್ಲಿ ಲೋಪಗಳನ್ನು ಸರಿಪಡಿಸಿ ಅನುಮತಿ ಪಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಈ ಕಠಿಣ ನಿಲುವಿನಿಂದಾಗಿ ಕಾರ್ಯಕ್ರಮ ನಿಗದಿತ ವೇಳಾಪಟ್ಟಿಯಂತೆ ಪ್ರಸಾರವಾಗುತ್ತದೆಯೇ ಎಂಬ ಬಗ್ಗೆ ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net