

ಸಿಂಧನೂರು: ತುಂಗಭದ್ರಾ ಜಲಾಶಯದಲ್ಲಿ 60 ಟಿಎಂಸಿ ನೀರು ಸಂಗ್ರಹವಾಗಿದೆ. ಸರಾಸರಿ 90 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಒಳ ಹರಿವು ದಾಖಲಾಗಿದೆ. ಕೂಡಲೇ ಎಡದಂಡೆ ನಾಲೆಗೆ ನೀರು ಹರಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವಂತರಾಯಗೌಡ ಕಲ್ಲೂರು ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜೂನ್‌ನಲ್ಲಿ ಮಳೆಯ ಅಭಾವದಿಂದ ತುಂಗಭದ್ರಾ ಜಲಾಶಯ ಭರ್ತಿಯಾಗುವುದಿಲ್ಲ ಎಂದು ರೈತರು ಆತಂಕಗೊಂಡಿದ್ದರು. ಜುಲೈ ತಿಂಗಳಲ್ಲಿ ವರುಣನ ಕೃಪೆಯಿಂದ ಉತ್ತಮ ಮಳೆಯಾಗುತ್ತಿದೆ. ಸದ್ಯ ಜಲಾಶಯದಲ್ಲಿ 60 ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿದೆ. ಕಳೆದ ವರ್ಷ 40 ಟಿಎಂಸಿ ಇದ್ದಾಗಲೇ ಜುಲೈ ತಿಂಗಳಲ್ಲಿ ನೀರು ಹರಿಸಲಾಗಿತ್ತು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಸೇರಿ ಜಿಲ್ಲೆಯ ಶಾಸಕರು ನೀರು ಹರಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಜತೆಗೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರ ಆಯ್ಕೆ, ಕಾಡಾ ಅಧ್ಯಕ್ಷರ ನೇಮಕ ಹಾಗೂ ಐಸಿಸಿ ಸಭೆಗೆ ರೈತ ಮುಖಂಡರ ಆಹ್ವಾನಿಸಬೇಕು ಎಂದರು.
ಇದನ್ನೂ ಓದಿ: ಹೊಸಪೇಟೆ: ಬುದ್ಧಿ ಮಾತು ಹೇಳಿದ್ದಕ್ಕೆ ಚಾಕು ಇರಿತ
ಎಡದಂಡೆ ನಾಲೆ ನಿರ್ಮಾಣವಾದ ಸುಮಾರು ವರ್ಷ 60 ವರ್ಷಗಳಿಂದ ಆನ್-ಆಫ್ ಪದ್ಧತಿ ಅಳವಡಿಸಿರಲಿಲ್ಲ. ಆದರೆ ಮೈಲ್ 47 ರಿಂದ 169 ರ ಮೈಲ್‌ವರೆಗೆ ಈ ಪದ್ಧತಿ ಮಾಡಿರುವುದು ಖಂಡನೀಯ. ಇದನ್ನು ಕೂಡಲೇ ತೆಗೆಯಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು. ಅಲ್ಲದೆ ಗೇಜ್ ಪ್ರಕಾರ ನೀರು ಬಿಡುಗಡೆಗೊಳಿಸಬೇಕು. ನೀರಿನ ಪ್ರಮಾಣ ಕಡಿಮೆ ಮಾಡುವುದರಿಂದ ಕೆಳಭಾಗಕ್ಕೆ ನೀರು ತಲುಪುತ್ತಿಲ್ಲ ಎಂದು ದೂರಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕ ಅಧ್ಯಕ್ಷ ವಿರುಪನಗೌಡ, ಉಪಾಧ್ಯಕ್ಷ ತಿಪ್ಪಣ್ಣ ಮುಳ್ಳೂರು, ಬಿ.ಲಿಂಗಪ್ಪ ಇದ್ದರು.