

ತುಮಕೂರು: ಇಂದು ಕಲ್ಪತರು ನಾಡು ತುಮಕೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ತುಮಕೂರಿನ ಜನತೆ ಸಜ್ಜಾಗಿದ್ದಾರೆ. ಎಚ್ಎಎಲ್ ತಯಾರಿಕ ಘಟಕ ಉದ್ಘಾಟನೆಗೆ ಬರುವ ಮೋದಿ ಅವರಿಗಾಗಿ ಗುಬ್ಬಿ ಜನತೆಯಿಂದ ವಿಶೇಷ ಹಾರ ಹಾಗೂ ಪೇಟಾ ತಯಾರಿಯಾಗಿದೆ.
ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್ನಲ್ಲಿ ಜಗತ್ತಿನ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕಗಳಲ್ಲೊಂದಾದ ಎಚ್ಎಎಲ್ ಘಟಕವನ್ನು ಇಂದು ಮಧ್ಯಾಹ್ನ 3.30ಕ್ಕೆ ಪ್ರಧಾನಿ ಮೋದಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದು, ಜಿಲ್ಲೆಯ ಜನತೆಯ ಪರವಾಗಿ ಮೋದಿ ಅವರನ್ನು ವಿಶೇಷವಾಗಿ ಅಭಿನಂದಿಸಲಾಗುತ್ತಿದೆ.
ಮೋದಿ ಅವರು ಜಿಲ್ಲೆಗೆ ಕೊಟ್ಟ ಕೊಡುಗೆಗೆ ನಮ್ಮ ಜಿಲ್ಲೆಯ ವಾಣಿಜ್ಯ ಬೆಳೆಗಳಲ್ಲೊಂದಾದ ಅಡಕೆ ಗೋಟುಗಳಿಂದಲೇ ತಯಾರಿಸಿದ 300 ಗ್ರಾಂ ತೂಕದ ಅಡಕೆ ಪೇಟ ಹಾಗೂ 1.5 ಕೆ.ಜಿ. ತೂಕದ ಗುಂಡು ಅಡಕೆಯಿಂದ ನಿರ್ಮಿಸಿರುವ ಅಡಕೆ ಹಾರದ ಜತೆಗೆ ಶಿವಕುಮಾರ ಶ್ರೀಗಳ ಪತ್ರಿಮೆಯನ್ನು ಮೋದಿ ಅವರಿಗೆ ನೀಡಿ ಗೌರವಿಸಲಾಗುತ್ತದೆ.
ಈ ವಿಶೇಷ ಗೌರವವನ್ನು ಜಿಲ್ಲೆಯ ಜನರ ಪರವಾಗಿ ಜಿಲ್ಲಾಡಳಿತದಿಂದ ಸಲ್ಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು. ಈ ಅಡಕೆ ಪೇಟ, ಅಡಕೆ ಹಾರವನ್ನು ಗುಬ್ಬಿ ತಾಲೂಕಿನ ಚಿಕ್ಕೋನಹಳ್ಳಿಪಾಳ್ಯದ ನಟರಾಜ್ ನಿರ್ಮಿಸಿದ್ದು ಪ್ರಧಾನಿ ಮೋದಿ ಅವರ ಶಿರವನ್ನು ಅಲಂಕರಿಸಲಿದೆ.
ಸಂಚಾರ ಬದಲಾವಣೆ
ನೂತನ ಹೆಚ್ಎಎಲ್ ತಯಾರಿಕಾ ಘಟಕ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಗುಬ್ಬಿಯಿಂದ ಕೆಬಿ ಕ್ರಾಸ್ ಹಾಗೂ ಕೆಬಿ ಕ್ರಾಸ್ನಿಂದ ಗುಬ್ಬಿ ಕಡೆಗೆ ಸಂಚರಿಸುವ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಇಂದು ಬೆಳಗ್ಗೆ 6 ರಿಂದ ಸಂಜೆ 7 ಗಂಟೆವರೆಗೆ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಗುಬ್ಬಿ, ನಿಟ್ಟೂರು ಕಡೆಯಿಂದ ಸಂಚರಿಸುವ ವಾಹನಗಳು, ನಿಟ್ಟೂರು, ಟಿಬಿ ಕ್ರಾಸ್, ತುರುವೇಕೆರೆ ಮಾರ್ಗವಾಗಿ ಕೆಬಿ ಕ್ರಾಸ್ ಕಡೆಗೆ ಸಂಚರಿಸಬೇಕು ಮತ್ತು ಕೆಬಿ ಕ್ರಾಸ್ ಕಡೆಯಿಂದ ಬರುವ ವಾಹನಗಳು ಕೆಬಿ ಕ್ರಾಸ್, ತುರುವೇಕೆರೆ, ಟಿಬಿ ಕ್ರಾಸ್ ಮಾರ್ಗವಾಗಿ ನಿಟ್ಟೂರಿಗೆ ಸಂಚರಿಸಬೇಕು. ಮಾರ್ಗ ಬದಲಾವಣೆ ಮಾಡಿ ತುಮಕೂರು ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಆದೇಶಿಸಿದ್ದಾರೆ.
ಕಲ್ಪತರು ನಾಡಲ್ಲಿ ಪೊಲೀಸರ ಹದ್ದಿನಕಣ್ಣು
ತುಮಕೂರಿಗೆ ಮೋದಿ ಆಗಮನ ಹಿನ್ನೆಲೆ ಗುಬ್ಬಿ ಬಳಿ ನಿರ್ಮಾಣವಾಗಿರುವ ಎಚ್ಎಎಲ್ ಆವರಣದಲ್ಲಿ . ಎಡಿಜಿಪಿ ನೇತೃತ್ವದಲ್ಲಿ ಪೊಲೀಸ್ ಬಿಗಿಭದ್ರತೆ ಏರ್ಪಡಿಸಲಾಗಿದೆ. ಎಡಿಜಿಪಿ-1, ಐಜಿ- 1, ಎಸ್ಪಿ -7, ಡಿವೈಎಸ್ಪಿ- 20, ಪೊಲೀಸ್ ಇನ್ಸ್ಪೆಕ್ಟರ್-55, ಪೊಲೀಸ್ ಸಿಬ್ಬಂದಿ-1200, ಸಬ್ ಇನ್ಸ್ಪೆಕ್ಟರ್-150, ಹೋಮ್ ಗಾರ್ಡ್ -400, ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿ- 14, ಕೆಎಸ್ಆರ್ಪಿ ತುಕಡಿ-12 ಸೇರಿದಂತೆ ಒಟ್ಟು 3 ಸಾವಿರ ಪೊಲೀಸರು ಬಿಗಿಭದ್ರತೆಗೆ ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. (ದಿಗ್ವಿಜಯ ನ್ಯೂಸ್)