

ತುಮಕೂರು: ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ 8ನೇ ಬಲಿಯಾಗಿದೆ. ಶನಿವಾರ ಕೂಡ 13 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಪ್ರಕರಣಗಳ ಸಂಖ್ಯೆ 221ಕ್ಕೇರಿದೆ. ತುಮಕೂರು ನಗರದಲ್ಲಿ 6, ಪಾವಗಡ 3, ಮಧುಗಿರಿ 2, ಕುಣಿಗಲ್ ತಾಲೂಕಿನಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮರಳೂರು ದಿಣ್ಣೆಯ 50 ವರ್ಷದ ಮಹಿಳೆಗೆ ಜ್ವರ ಕಾಣಿಸಿಕೊಂಡಿದ್ದು ನಗರದ ಖಾಸಗಿ ನರ್ಸಿಂಗ್ ಹೋಂನಲ್ಲಿ ಜೂ.26 ರಿಂದ 28ರವರೆಗೆ ಚಿಕಿತ್ಸೆ ಪಡೆದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಮಹಿಳೆ ಚಿಕಿತ್ಸೆ ಲಿಸದೆ ಶುಕ್ರವಾರ ಮೃತಪಟ್ಟಿದ್ದು, ಅವರಿಗೆ ಸೋಂಕು ದೃಢಪಟ್ಟಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ವೈದ್ಯರ ಪುತ್ರಿಗೆ ಸೋಂಕು: ಜಿಲ್ಲಾಸ್ಪತ್ರೆ ವೈದ್ಯರ ಪುತ್ರಿ, ಸರಸ್ವತಿ ಪುರಂನ 7 ವರ್ಷದ ಹೆಣ್ಣು ಮಗುವಿಗೆ ಕರೊನಾ ದೃಢಪಟ್ಟಿದೆ, ಮಗುವಿನ ದೊಡ್ಡಮ್ಮಗೂ ಪಾಸಿಟಿವ್ ಬಂದಿದೆ. ಜೂ.16 ರಿಂದ ಜು.2ರವರೆಗೆ ಉಡುಪಿಯಲ್ಲಿ ವಾಸ್ತವ್ಯ ಇದ್ದ ಇವರು, ಸೋಂಕಿತರ ಜತೆಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಜು.2 ರಂದು ತುಮಕೂರಿಗೆ ಹಿಂದಿರುಗಿದ ಬಳಿಕ ಪರೀಕ್ಷೆಗೆ ಒಳಪಟ್ಟಿದ್ದರು. ನಾಲ್ವರು ಪ್ರಾಥಮಿಕ ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಮಗುವಿನ ತಂದೆಗೆ ನೆಗೆಟಿವ್ ಬಂದಿದೆ.
ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಂಜುನಾಥ ನಗರದ 49 ವರ್ಷದ ವ್ಯಕ್ತಿ ಬೆಂಗಳೂರಿನ ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಟ್ಟಿದ್ದರು. ಸೋಂಕು ದೃಢಪಟ್ಟಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಾರುತಿ ನಗರದ 47 ವರ್ಷದ ವ್ಯಕ್ತಿ ಬೆಂಗಳೂರಿಗೆ ಹೋಗಿ ಬಂದಿದ್ದು ಸೋಂಕು ತಗುಲಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. 7 ಮಂದಿ ದ್ವಿತೀಯ ಸಂಪರ್ಕಿತರನ್ನು ಹೋಂ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 38 ವರ್ಷದ ಸದಾಶಿವನಗರ ರಿಂಗ್ ರಸ್ತೆ ನಿವಾಸಿ ಇತ್ತೀಚೆಗೆ ಕೆಲಸದ ನಿಮಿತ್ತ ಮೈಸೂರಿಗೆ ತೆರಳಿದ್ದು ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕುಣಿಗಲ್‌ನ ಮಹಾವೀರ ನಗರದ 24 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ. ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತೆರಳಿದ್ದಾಗ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಬೆಂಗಳೂರು ಪ್ರವಾಸ ಹಿನ್ನೆಲೆ ಹೊಂದಿದ್ದು, 10 ಪ್ರಾಥಮಿಕ, 12 ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿದೆ. ಕುಣಿಗಲ್‌ನ ಸಿದ್ಧಾರ್ಥ ನಗರದ 48 ವರ್ಷದ ಮಹಿಳೆಗೂ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದು ಅವರಿಗೂ ಸೋಂಕು ದೃಢಪಟ್ಟಿದೆ. ಬೆಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ. ಮಧುಗಿರಿಯ ಸಿದ್ದಾಪುರ ಗೇಟ್ ನಿವಾಸಿ 39 ವರ್ಷದ ವ್ಯಕ್ತಿ, ವಿದ್ಯಾನಗರದ ನಿವಾಸಿ 35 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು ಅವರ ಪ್ರಾಥಮಿಕ ಸಂಪರ್ಕ ಹೊಂದಿದ್ದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.
ಪಾವಗಡದಲ್ಲಿ ಸೋಂಕು ಹತೋಟಿಗೆ?: ಶನಿವಾರ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸ್ವಲ್ಪ ಹತೋಟಿಗೆ ಬಂದಿದೆ. ಪ್ರಯಾಣದ ಹಿನ್ನೆಲೆ ಇಲ್ಲದ ನ್ಯಾಯದಗುಂಟೆಯ 49 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ, ಆದರೆ ರೋಗಲಕ್ಷಣಗಳು ಕಂಡುಬಂದಿಲ್ಲ. ಇನ್ನು ಪಿ-13242 ಸೋಂಕಿತನ ಸಂಪರ್ಕ ಹೊಂದಿದ್ದ ಪಟ್ಟಣದ ರೈನ್‌ಗೇಜ್‌ನ್ನು 23 ವರ್ಷದ ಯುವಕ ಹಾಗೂ ವಿನಾಯಕ ನಗರದ 32 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.
ಮಾಗಡಿ ದಂಪತಿ ಆತಂಕ: ಕುಣಿಗಲ್: ಕರೊನಾ ಶಂಕೆ ಹಿನ್ನೆಲೆಯಲ್ಲಿ ಶನಿವಾರ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ ಮಾಗಡಿ ತಾಲೂಕಿನ ದಂಪತಿಗೆ ಪಾಸಿಟಿವ್ ಬಂದಿದ್ದು, ತಾಲೂಕು ವೈದ್ಯಾಧಿಕಾರಿ ಮಾಗಡಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಾಗಡಿಯಲ್ಲಿ ಗಂಟಲು ದ್ರವ ನೀಡಿದ್ದ ದಂಪತಿ ಕುಣಿಗಲ್ ಆಸ್ಪತ್ರೆಗೆ ಬಂದಿದ್ದರಿಂದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ನಂತರ ಮಾಗಡಿ ತಾಲೂಕು ಆಡಳಿತ ದಂಪತಿಗೆ ಪಾಸಿಟಿವ್ ಇದೆ ಎಂದು ಮಾಹಿತಿ ನೀಡಿದ್ದರಿಂದ ಕುಣಿಗಲ್ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಆತಂಕಗೊಂಡು ಹೊರಗೆ ಬಂದು ನಿಂತಿದ್ದಾರೆ. ತಹಸೀಲ್ದಾರ್ ವಿಶ್ವನಾಥ್ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ಜಗದೀಶ್ ಸೋಂಕಿತ ದಂಪತಿಯನ್ನು ಮಾಗಡಿಗೆ ಕಳುಹಿಸಿಕೊಟ್ಟರು.