ತರಂಗಿಣಿ ಮಂಡಳಿಯಿಂದ ತುಳಸಿ ಸಂಕೀರ್ತನೆ

tulasi sankeerthane
ಬಾಲಪ್ಪ ಗುರಿಕಾರ ಬಾಲಚಂದ್ರ ರಾವ್ ಅವರ ಮನೆಯಲ್ಲಿ ನಡೆದ ತುಳಸಿ ಸಂಕೀರ್ತನೆ.
Published on

ಹೇಮನಾಥ್ ಪಡುಬಿದ್ರಿ ದೀಪಾವಳಿಯಿಂದ ಪ್ರಾರಂಭವಾಗಿ ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆಯೊಂದಿಗೆ ನಡೆಯುವ ತುಳಸಿ ಸಂಕೀರ್ತನೆ ನೃತ್ಯ ಪ್ರಾಕಾರ ಇಂದಿಗೂ ಕರಾವಳಿಯ ಬ್ರಾಹ್ಮಣ ಸಮುದಾಯದ ಮಠ, ಮಂದಿರಗಳು, ಮನೆ, ಮನೆಗಳಲ್ಲಿ ನಡೆಯುತ್ತಿವೆ. ಕೈಯಲ್ಲಿ ತಾಳ, ಕಾಲ ಹೆಜ್ಜೆಯ ಕ್ರಮಬದ್ಧ ಸಂವಹನದೊಂದಿಗೆ ವಾದಿರಾಜರು ಬರೆದ ದೇವರನಾಮ ಸಂಕೀರ್ತನೆಗಳನ್ನು ಬಾಯಲ್ಲಿ ಪಠಿಸುತ್ತಾ ತುಳಸಿಕಟ್ಟೆಗೆ ಪ್ರದಕ್ಷಿಣೆ ಹಾಕುವ ಈ ಪದ್ಧತಿ ಈಗ ಕಾಣಸಿಗುವುದೇ ವಿರಳ. ಆದರೂ ಹಿರಿಯರಿಂದ ನಡೆಸಿಕೊಂಡು ಬಂದ ತುಳಸಿ ಸಂಕೀರ್ತನೆಯನ್ನು ಪಡುಬಿದ್ರಿ ತರಂಗಿಣಿ ಮಿತ್ರಮಂಡಳಿ ಈಗಲೂ ಮುಂದುವರಿಸುತ್ತಿದೆ. ಪಡುಬಿದ್ರಿ ತರಂಗಿಣಿ ಮಿತ್ರಮಂಡಳಿಯು 35ವರ್ಷಗಳಿಂದ ನಾಡಿನಾದ್ಯಂತ ಈ ಕಲೆ ಪಸರಿಸಿ ಹಲವು ಪುರಸ್ಕಾರ ಪಡೆದಿದೆ. ಜತೆಗೆ ಪಡುಬಿದ್ರಿಯ ನಳಿನಾಕ್ಷಿಯಮ್ಮ, ಬಾಲಪ್ಪ ಗುರಿಕಾರ ಬಾಲಚಂದ್ರರಾವ್, ಪೋತ ನಾರಾಯಣ ರಾವ್, ಸುಶೀಲಮ್ಮಾ, ಪತ್ತಪ್ಪ ಅಮರೇಂದ್ರ ಆಚಾರ್, ನಾಣಯ್ಯ ಮಾಧವ ರಾವ್, ಬಾಲಪ್ಪ ಅನಂತರಾಮ ರಾವ್, ಸುಧಾಕರ ರಾವ್, ಹೆಜಮಾಡಿ ರಾಮಚಂದ್ರ ಭಟ್, ತಮ್ಮಾಜ ಕೃಷ್ಣಮೂರ್ತಿ ಆಚಾರ್, ಹೆಜಮಾಡಿ ರಂಗಣ್ಣ ಭಟ್, ಪಾಂಡುರಂಗ ಭಜನಾ ಮಂಡಳಿ, ಅದಮಾರು, ಕಟಪಾಡಿ ಮಟ್ಟು, ಕುಂಜಾರು, ಪಡುಬಿದ್ರಿ, ಎಲ್ಲೂರು, ಬೆಳಪು, ಆರೂರು, ಕಡಂದಲೆ, ಪಾವಂಜೆಗಳಲ್ಲಿ ತುಳಸಿ ಸಂಕೀರ್ತನೆಯನ್ನು ನಿರಂತರ ನಡೆಸಿಕೊಂಡು ಬರಲಾಗುತ್ತಿದೆ. ಅಷ್ಟಮಠಾಧಿಪತಿಗಳ ವಿಶೇಷ ಅನುಗ್ರಹಕ್ಕೂ ಪಾತ್ರವಾಗಿದೆ.

ತುಳಸೀ ಸಂಕೀರ್ತನೆ ಹಿನ್ನೆಲೆ

ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಹಿಂದಿನಿಂದಲೂ ಬಹುಸಂಖ್ಯಾತ ಸದಸ್ಯರನ್ನೊಳಗೊಂಡ ಪತ್ತಪ್ಪ ಬೈಲಮನೆತನ, ವಾಮನ ಮನೆತನ, ಬಾಲಪ್ಪ ಮನೆತನ ವಾದಿರಾಜರ ಸಂಕೀರ್ತನೆ ಆಸಕ್ತಿಯನ್ನು ಮೈಗೂಡಿಸಿಕೊಂಡು ಬಂದಿತ್ತು. ಮುಂದೆ ಅವರ ಶಿಷ್ಯಂದಿರಾದ ಪತ್ತನಂಕ ಮನೆತನದ ದಿ. ಬಾಜಿರಾವ್ ಹಾಗೂ ಅವರ ಬಳಿಕ ದಿ. ಹರಿಕೃಷ ್ಣಶರ್ಮ ಅವರು ಮುಂದುವರಿಸಿದ್ದಾರೆ. ಪ್ರಸ್ತುತ ಪಡುಬಿದ್ರಿ ತರಂಗಿಣಿ ಮಿತ್ರಮಂಡಳಿಯ ಗೌರವಾಧ್ಯಕ್ಷ ಸುಧಾಕರ ರಾವ್ ಮಾರ್ಗದರ್ಶನದಲ್ಲಿ ಅವರ ಶಿಷ್ಯ ಚಂದ್ರಶೇಖರ ರಾವ್ ಮುಂದಾಳತ್ವದಲ್ಲಿ ಈ ಕಲೆ ಮುಂದುವರಿಯುತ್ತಿದೆ.

ಸುಮಾರು 250 ವರ್ಷಗಳಿಂದ ಈ ಸಂಕೀರ್ತನೆ ಕಾರ್ಯಕ್ರಮ ನಡೆಯುತ್ತಿವೆ. ವಾದಿರಾಜ ನಾಮ ಸಂಕೀರ್ತನೆಯಲ್ಲಿ 40 ಸದಸ್ಯರ ಒಳಗೊಂಡ ತರಂಗಿಣಿ ಮಿತ್ರಮಂಡಳಿಯ ಎಲ್ಲ ಚಟುವಟಿಕೆಗಳ ವ್ಯವಸ್ಥಾಪನಾ ಕಾರ್ಯವನ್ನು ಅಧ್ಯಕ್ಷ ರಮಾಕಾಂತ ರಾವ್ ನಿರ್ವಹಿಸುತ್ತಿದ್ದು, ಮುರುಡಿ ಹರಿಕೃಷ್ಣ ರಾವ್, ಗಣೇಶ್ ರಾವ್ ಮತ್ತು ಪ್ರಶಾಂತ್ ಉಪಾಧ್ಯಾಯ ಸಹಕರಿಸುತ್ತಿದ್ದಾರೆ. ಪಿ. ರಮಾಕಾಂತ ರಾವ್, ಅಧ್ಯಕ್ಷ, ತರಂಗಿಣಿ ಮಿತ್ರಮಂಡಳಿ ಮಧ್ವನಗರ.

ಶ್ರೀ ವಾದಿರಾಜರ ಕಾಲಘಟ್ಟದಿಂದಲೇ ಈ ಸಂಕಿರ್ತನಾ ಕಲಾ ಪ್ರಕಾರದ ಆರಂಭ ಹಾಗೂ ಪ್ರಸರಣ ನಡೆಯುತ್ತಿದೆ. ಕಾರ್ತಿಕ ದಾಮೋದರಾತ್ಮಕ ಮಧ್ವಪತಿ ಶ್ರೀಗೋಪಾಲಕೃಷ್ಣ ಅಂತರ್ಗತ ಕೇಶವಾದಿ ದ್ವಾದಶ ಮೂರ್ತಿಗಳು ಆವಾಹಿಸಿದ ಈ ಪೂಜೆಗೆ ತನ್ನದೇ ಆದ ಹಿರಿಮೆ ಇದೆ. ತುಳಸಿವನ ಮತ್ತು ಧಾತ್ರಿ ಮೂಲದಲ್ಲಿ ಕಾರ್ತಿಕ ಮಾಸದಲ್ಲಿ ಈ ಎಲ್ಲಾ ದೇವತೆಗಳ ಸಾನ್ನಿಧ್ಯವಿರುವುದಾಗಿ ನಂಬಲಾಗಿದೆ. ಈ ಕಾರ್ಯಕ್ರಮಕ್ಕೆ ಧಾರ್ಮಿಕ ದತ್ತಿ ಇಲಾಖೆಯಿಂದ ಯಾವುದೇ ನೆರವಂತೂ ಲಭ್ಯವಾಗುತ್ತಿಲ್ಲ. ತುಳಸಿ ಸಂಕೀರ್ತನೆ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದಾಖಲೀಕರಣ ಮಾಡುವಲ್ಲಿ ಸರ್ಕಾರ ವಿಶೇಷ ಆಸಕ್ತಿ ವಹಿಸಬೇಕು. ಕೆ. ಎಲ್. ಕುಂಡಂತಾಯ, ಜಾನಪದ ವಿದ್ವಾಂಸ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net