

ನವದೆಹಲಿ: ರೈಲಿನ ಸಿಬ್ಬಂದಿಗಳು ಪ್ರಯಾಣಿಕರೊಬ್ಬರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿರುವ ಘಟನೆ ಅಮೃತಸರ-ಕತಿಹಾರ್ ಎಕ್ಸ್ಪ್ರೆಸ್ನಲ್ಲಿ ನಡೆದಿದೆ. ಬಿಹಾರದ ಸಿವಾನ್‌ನಿಂದ ನವದೆಹಲಿಗೆ ಪ್ರಯಾಣಿಸುವ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಯ ವಿಡಿಯೋ (Video Viral) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ (Video Viral) ನೋಡುವುದಾದರೆ ಒಬ್ಬ ವ್ಯಕ್ತಿಯನ್ನು ಟಿಟಿಇ ಹಾಗೂ ರೈಲಿನ ಅಟೆಂಡೆಂಟ್ಗಳು ಹಿಗ್ಗಾಮುಗ್ಗಾ ಥಳಿಸುತ್ತಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವುದನ್ನು ತೋರಿಸುತ್ತದೆ. ಇದನ್ನು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕರೊಬ್ಬರು ಚಿತ್ರೀಕರಿಸಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ವೃತ್ತಿಯಲ್ಲಿ ಲಾರಿ ಚಾಲಕನಾಗಿರುವ ಶೇಖ್ ತಾಜುದ್ದೀನ್ ಎಂಬಾತ ರೈಲಿನಲ್ಲಿ ಕೋಚ್ ಅಟೆಂಡೆಂಟ್‌ಗಳಾದ ವಿಕ್ರಮ್ ಚೌಹಾಣ್ ಹಾಗೂ ಸೋನು ಮಹತೋ ಅವರೊಂದಿಗೆ ಮದ್ಯ ಸೇವಿಸಿದ್ದಾನೆ. ಮದ್ಯ ಸೇವಿಸಿದ ಬಳಿಕ ಆತ ಮಹಿಳಾ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಪ್ರಯಾಣಿಕರು ವಿಚಾರವನ್ನು ಟಿಟಿಇ ಗಮನಕ್ಕೆ ತಂದಿದ್ದಾರೆ.
ಮಹಿಳಾ ಪ್ರಯಾಣಿಕರ ಜತೆ ಅಸಭ್ಯ ವರ್ತನೆಯನ್ನು ಪ್ರಶ್ನಿಸಿದ ಟಿಟಿಇ ಮೇಲೆ ತಾಜುದ್ದೀನ್ ಹಲ್ಲೆ ನಡೆಸಿದ್ದು, ಕೋಚ್ ಅಟೆಂಡೆಂಟ್ಗಳು ರಕ್ಷಣೆಗೆ ಧಾವಿಸಿ ತಾಜುದ್ದೀನ್ರನ್ನು ಥಳಿಸಿದ್ದಾರೆ. ಬಳಿಕ ಫಿರೋಜಾಬಾದ್ ರೈಲ್ವೆ ಪೊಲೀಸರು ಟಿಟಿಇ ಹಾಗೂ ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದು, ಕೋಚ್ ಅಟೆಂಡೆಂಟ್ ವಿಕ್ರಮ್ ಚೌಹಾಣ್ ತಪ್ಪಿಸಿಕೊಂಡಿದ್ದಾನೆ.
ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಇಬ್ಬರು ನೀಡಿರುವ ದೂರನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಕೆಲಸದ ವೇಳೆ ಕುಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಅಟೆಂಡೆಂಟ್ಗಳನ್ನು ಅಮಾನತು ಮಾಡಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.