ಭಕ್ತರ ಭಾವನೆಗೆ ಧಕ್ಕೆ ತರುವ ಹುನ್ನಾರ; ಗೋವುಗಳ ಸಾವು ಪ್ರಕರಣಕ್ಕೆ ಟಿಟಿಡಿ ಸದಸ್ಯ ನರೇಶ್ ಕುಮಾರ್ ಸ್ಪಷ್ಟನೆ

goshala
Published on

ಬೆಂಗಳೂರು: ಕಳೆದ ಜೂನ್‌ನಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಟಿಟಿಡಿ ಆಡಳಿತ ಮಂಡಿಳಿಯು ಭಕ್ತಾದಿಗಳ ಅನುಕೂಲಕ್ಕಾಗಿ ತಿರುಪತಿ ತಿರುಮಲ ಧಾರ್ಮಿಕ ಸ್ಥಳದಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಹಿಂದಿನ ಆಡಳಿತ ಮಂಡಳಿ ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ಟಿಟಿಡಿ ಸದಸ್ಯ ನರೇಶ್ ಕುಮಾರ್ ಆರೋಪಿಸಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ನೇತೃತ್ವದಲ್ಲಿ ಈಗಾಗಲೇ ಇದ್ದ ಹಲವಾರು ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇದರಿಂದಾಗಿ ಅನ್ನಪ್ರಸಾದ ಮತ್ತು ಲಡ್ಡು ಪ್ರಸಾದದ ಗುಣಮಟ್ಟದಲ್ಲಿ ಗಣನೀಯವಾಗಿ ಬದಲಾವಣೆಯಾಗಿದೆ. ಸೇವೆಗಳು, ವಾಸ್ತವ್ಯ ಹಾಗೂ ದರ್ಶನಗಳ ಟಿಕೇಟ್‌ನಲ್ಲಿ ಪಾರದರ್ಶಕತೆಯನ್ನು ತರಲಾಗಿದೆ. ಇದರಿಂದ ಸಾಮಾನ್ಯ ಭಕ್ತಾದಿಗಳು ಹೆಚ್ಚಿನ ತೊಂದರೆಯಿಲ್ಲದೆ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

ಟಿಟಿಡಿ ಗೋಶಾಲೆಯಲ್ಲಿ ಪ್ರತಿ ತಿಂಗಳು ಕಾಯಿಲೆ, ವಯಸ್ಸು ಮತ್ತಿತರ ಕಾರಣಗಳಿಂದ ಸರಿಸುಮಾರು 15 ಗೋವುಗಳು ಸಾವನ್ನಪ್ಪುತ್ತವೆ. 2024 ರಲ್ಲಿ 179 ಗೋವುಗಳು ಸಾವನ್ನಪ್ಪಿದ್ದು, ಪೆಬ್ರವರಿ ಹಾಗೂ ಜನವರಿ 2025 ರಲ್ಲಿ 43 ಗೋವುಗಳು ವಯೋಸಹಜ ಕಾರಣಗಳಿಂದ ಸಾವನ್ನಪ್ಪಿವೆ. ಆದರೆ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರು ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಟಿಟಿಡಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಅಪಪ್ರಚಾರದ ಮೂಲಕ ದೇಶ ವಿದೇಶಗಳಲ್ಲಿರುವ ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ತರುವುದು ಅವರ ಉದ್ದೇಶವಾಗಿದೆ ಎಂದು ನರೇಶ್ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net