ತಿರುಪತಿ ತಿಮ್ಮಪ್ಪನ ಬ್ರಹ್ಮೋತ್ಸವಕ್ಕೆ ವಿಶೇಷ ದರ್ಶನ ರದ್ದು.. ಟಿಟಿಡಿ ಪ್ರಮುಖ ತೀರ್ಮಾನ!

Tirupathi: ಟಿಟಿಡಿ, ಎಸ್‌ಎಸ್‌ಡಿ (ಸ್ಲಾಟೆಡ್ ಸರ್ವ ದರ್ಶನ), ದಿವ್ಯ ದರ್ಶನ, ಉಚಿತ ದರ್ಶನಕ್ಕೆ ಅವಕಾಶ ಕಲ್ಪಿಸಿದೆ.
Tirupathi
Published on

ತಿರುಪತಿ: ಜಗತ್ತಿನ ಅತ್ಯಂತ ಶ್ರೀಮಂತ ದೇವರು, ಕಲಿಯುಗ ವೈಕುಂಠ ಎಂದೆಲ್ಲ ಕರೆಸಿಕೊಳ್ಳುವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸಾಮಾನ್ಯ ದಿನಗಳಲ್ಲೇ ಲಕ್ಷಾಂತರ ಭಕ್ತರು ಸಾಗರದೋಪಾದಿಯಲ್ಲಿ ಹರಿದು ಬರುತ್ತಾರೆ. ಇನ್ನು ವಿಶೇಷ ದಿನಗಳಲ್ಲಂತೂ ಭಕ್ತರ ದಟ್ಟಣೆ ವಿಪರೀತವಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಟಿಟಿಡಿ ಹಲವು ಕ್ರಮಗಳನ್ನು ಕೈಗೊಳ್ಳಲಿದೆ. ಅದರಂತೆಯೇ ತಿರುಮಲ ತಿರುಪತಿ ದೇವಸ್ಥಾನ ಇತ್ತೀಚೆಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಬಾರಿಯ ಬ್ರಹ್ಮೋತ್ಸವಕ್ಕೆ ವಿಶೇಷ ದರ್ಶನ ರದ್ದು ಮಾಡಿ ಪ್ರಮುಖ ತೀರ್ಮಾನ ತೆಗೆದುಕೊಂಡಿದೆ.

ತಿರುಮಲದಲ್ಲಿ ಅಕ್ಟೋಬರ್ 3 ರಿಂದ ಅಕ್ಟೋಬರ್ 12 ರವರೆಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆರ್ಜಿತ ಸೇವೆಗಳು, ಬ್ರೇಕ್ ದರ್ಶನಗಳು ಮತ್ತು ವಿಶೇಷ ದರ್ಶನಗಳನ್ನು ರದ್ದುಗೊಳಿಸುವುದಾಗಿ ಟಿಟಿಡಿ ತಿಳಿಸಿದೆ.

ಬ್ರಹ್ಮೋತ್ಸವದ ಅಂಗವಾಗಿ ಅಕ್ಟೋಬರ್ 3 ರಂದು ಅಂಕುರಾರ್ಪಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 12 ರಂದು ವೆಂಕಟೇಶ್ವರ ದೇವರ ಚಕ್ರಸ್ನಾನದವರೆಗೆ ವೃದ್ಧರು, ಅಂಗವಿಕಲರು ಮತ್ತು ಚಿಕ್ಕ ಮಕ್ಕಳ ಪೋಷಕರಿಗೆ ದೈನಂದಿನ ವಿಶೇಷ ದರ್ಶನವನ್ನು ಟಿಟಿಡಿ ರದ್ದುಗೊಳಿಸಿದೆ. ಟಿಟಿಡಿ ವಿಐಪಿ ಬ್ರೇಕ್ ದರ್ಶನವನ್ನು ಪ್ರೋಟೋಕಾಲ್ ಗಣ್ಯರಿಗೆ ಮಾತ್ರ ನಿರ್ಬಂಧಿಸಿದೆ.

ಮತ್ತೊಂದೆಡೆ ವಾರ್ಷಿಕ ಬ್ರಹ್ಮೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ. ಅಕ್ಟೋಬರ್ 4 ರಂದು ಧ್ವಜಾರೋಹಣ, ಅಕ್ಟೋಬರ್ 8 ರಂದು ಗರುಡಸೇವೆ, ಅಕ್ಟೋಬರ್ 9 ರಂದು ಸ್ವರ್ಣರಥ, ಅಕ್ಟೋಬರ್ 11 ರಂದು ರಥೋತ್ಸವ ಮತ್ತು ಅಕ್ಟೋಬರ್ 12 ರಂದು ಚಕ್ರಸ್ನಾನವನ್ನು ಮಾಡಲಾಗುತ್ತದೆ. ಬ್ರಹ್ಮೋತ್ಸವದ ಸಂದರ್ಭದಲ್ಲಿ ಸ್ವಾಮಿಯ ವಾಹನಸೇವೆಯನ್ನು ವೀಕ್ಷಿಸಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದ್ದರಿಂದ ಅವರಿಗೆ ಯಾವುದೇ ತೊಂದರೆಯಾಗದಂತೆ ದರ್ಶನವನ್ನು ಒದಗಿಸಲು ಟಿಟಿಡಿ ಬ್ರಹ್ಮೋತ್ಸವದ ಸಮಯದಲ್ಲಿ ಬ್ರೇಕ್ ದರ್ಶನಗಳು ಮತ್ತು ವಿಶೇಷ ದರ್ಶನಗಳನ್ನು ರದ್ದುಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net