

ಶಿರಸಿ: ತೀವ್ರ ಕುತೂಹಲ ಕೆರಳಿಸಿದ ಶಿರಸಿಯ ಪ್ರತಿಷ್ಠಿತ ತೋಟಗಾರರ ಸೇವಾ ಸಹಕಾರಿ ಸಂಘ( ಟಿಎಸ್ ಎಸ್)ಮತದಾನ ಭಾನುವಾರ ಮುಕ್ತಾಯವಾಗಿದ್ದು, ಅಚ್ಚರಿಯ ಫಲಿತಾಂಶದ ಸಾಧ್ಯತೆ ಇದೆ.
ಸಾಯಂಕಾಲ 5 ರ ನಂತರ ಮತ ಎಣಿಕೆ ಪ್ರಾರಂಭವಾಗಿದ್ದು, ತಡರಾತ್ರಿಯವರೆಗೂ ನಡೆಯುತ್ತಿದೆ. ಹಾಲಿ ಆಡಳಿತ ಮಂಡಳಿಯ ತಂಡ ತೀವ್ರ ಹಿನ್ನಡೆ ಅನುಭವಿಸಿದೆ.
ರಾತ್ರಿ 12 ಗಂಟೆವರೆಗಿನ ಮಾಹಿತಿಯಂತೆ ಎದುರಾಳಿ ಗೋಪಾಲಕೃಷ್ಣ ವೈದ್ಯ ತಂಡದ ನಾಲ್ವರು ಜಯಗಳಿಸಿದ್ದಾರೆ. 10 ಸ್ಪರ್ಧಿಗಳು ಮುನ್ನಡೆ ಸಾಧಿಸಿದ್ದಾರೆ.
ಹಾಲಿ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಮಾತ್ರ ಅಲ್ಪ ಮತಗಳಿಂದ ಮುಂದಿದ್ದಾರೆ.
ದಿ. ಕಡವೆ ಶ್ರೀಪಾದ ಹೆಗಡೆ ಅವರು ಕಟ್ಟಿ ಬೆಳೆಸಿದ ಅಡಕೆ ಬೆಳೆಗಾರರ ಸಹಕಾರಿ ಸಂಘವು, ಇದೇ ವರ್ಷ ಶತಮಾನಕ್ಕೆ ಕಾಲಿಟ್ಟಿದೆ. ರಾಜ್ಯದ ಅತಿ ದೊಡ್ಡ ಸಹಕಾರಿಯಾಗಿ ಬೆಳೆದು ನಿಂತಿದೆ. ಶ್ರೀಪಾದ ಹೆಗಡೆ ಕಡವೆ ಅವರ ಪುತ್ರ ರಾಮಕೃಷ್ಣ ಹೆಗಡೆ ಕಾರ್ಯಾಧ್ಯಕ್ಷರಾಗಿದ್ದರು. ಇದುವರೆಗೆ ಸಂಸ್ಥೆಯ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿದ್ದೇ ಕಡಿಮೆಯಾಗಿತ್ತು.
ಈ ಬಾರಿ 15 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. 32 ಅಭ್ಯರ್ಥಿಗಳು ಕಣದಲ್ಲಿದ್ದರು.
ಮುಖ್ಯವಾಗಿ ಹಾಲಿ ಆಡಳಿತ ಮಂಡಳಿಯ ತಂಡದ ಎದುರು ಮುಂಡಗನೆ ಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ನೇತೃತ್ವದ 15 ಜನರ ತಂಡ ಸ್ಪರ್ಧಿಸಿತ್ತು.
ಭಾನುವಾರ ಮತದಾನ ನಡೆದಿದ್ದು, ಸಂಸ್ಥೆಯ 3800 ಷೇರು ಸದಸ್ಯರ ಪೈಕಿ ಸುಮಾರು 3 ಸಾವಿರಕ್ಕೂ ಅಧಿಕ ಜನ ಮತ ಚಲಾಯಿಸಿದ್ದರು.
ಹಾಲಿ ಆಡಳಿತ ಮಂಡಳಿ ಸಂಸ್ಥೆ ವಿವಿಧ ಆಯಾಮಗಳಲ್ಲಿ ಬೆಳವಣಿಗೆಯಾದ ವಿಚಾರವಾಗಿ ಹಾಗೂ ಕಡವೆ ಕುಟುಂಬಕ್ಕೆ ಗೌರವ ನೀಡಬೇಕು ಎಂಬುದಾಗಿ ಪ್ರಚಾರ ನಡೆಸಿತ್ತು. ಇನ್ನೊಂದೆಡೆ ಎದುರಾಳಿ ವೈದ್ಯ ತಂಡವು ಹಾಲಿ ಆಡಳಿತ ಮಂಡಳಿ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿತ್ತು.