

ವಾಷಿಂಗ್ಟನ್: ಚೀನಾದ ವಸ್ತುಗಳ ಆಮದಿನ ಮೇಲೆ ಹೆಚ್ಚುವರಿ ಶೇಕಡ 100ರಷ್ಟು ತೆರಿಗೆ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೊಷಿಸಿದ್ದು, ಈ ಅಧಿಕ ಸುಂಕ ನವೆಂಬರ್ 1ರಿಂದ ಅಥವಾ ಅದಕ್ಕಿಂತ ಮೊದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಟ್ರಂಪ್ ಅವರ ಈ ನಿರ್ಧಾರದಿಂದ ಚೀನಾದ ವಸ್ತುಗಳ ಆಮದು ಮೇಲಿನ ಒಟ್ಟಾರೆ ಸುಂಕ ಶೇ. 130ಕ್ಕೆ ಏರಿಕೆಯಾಗಲಿದೆ. ಇದರಿಂದ ಈಗ, ಏಪ್ರಿಲ್ನಲ್ಲಿ ಜಾಗತಿಕ ಆರ್ಥಿಕ ಕುಸಿತದ ಭಯವನ್ನು ಹುಟ್ಟುಹಾಕಿದ್ದ ಸನ್ನಿವೇಶ ಮರುಕಳಿಸುವ ಸಾಧ್ಯತೆ ಇದೆ. ರೇರ್ ಅರ್ಥ್ ಮ್ಯಾಗ್ನೆಟ್ಗಳ ರಫ್ತಿನ ಮೇಲೆ ಚೀನಾ ಅ. 9ರಿಂದ ಹೊಸದಾಗಿ ಮತ್ತಷ್ಟು ನಿಯಂತ್ರಣ ಹೇರಿದ್ದು ಟ್ರಂಪ್ ಅವರನ್ನು ಕೆರಳಿಸಿದೆ. ಎಲೆಕ್ಟ್ರಿಕ್ ವಾಹನ, ರಕ್ಷಣಾ ಉಪಕರಣಗಳು, ನವೀಕರಿಸಬಹುದಾದ ಇಂಧನ ಮುಂತಾದ ವಲಯಗಳಲ್ಲಿ ಬಳಸಲು ಅಮೆರಿಕಕ್ಕೆ ರೇರ್ ಅರ್ಥ್ ಮ್ಯಾಗ್ನೆಟ್ಸ್ ಅನಿವಾರ್ಯ. ಇವುಗಳ ಉತ್ಪಾದನೆಯಲ್ಲಿ ಚೀನಾ ಏಕಸ್ವಾಮ್ಯ ಹೊಂದಿದೆ.
‘ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಚಿಪ್, ಲೇಸರ್, ಜೆಟ್ ಎಂಜಿನ್ಗಳು ಮತ್ತು ಇತರ ತಂತ್ರಜ್ಞಾನಗಳ*ಲ್ಲಿ ಬಳಸುವ ಲೋಹಗಳು ಮತ್ತು ಆಯಸ್ಕಾಂತಗಳನ್ನು ನೀಡದಿರುವ ಮೂಲಕ ಇಡೀ ಪ್ರಪಂಚವನ್ನು ತನ್ನ ಮುಷ್ಟಿಯೊಳಗೆ ಇಟ್ಟುಕೊಳ್ಳಲು ಚೀನಾ ಬಯಸುತ್ತಿದೆ. ಈ ತಿಂಗಳು ದಕ್ಷಿಣ ಕೊರಿಯಾದಲ್ಲಿ ನಡೆಯುವ ಸಮಾವೇಶವೊಂದರಲ್ಲಿ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ರನ್ನು ಭೇಟಿ ಮಾಡುವುದಿತ್ತು. ಆದರೆ ಇಂತಹ ಆಘಾತಕಾರಿ, ಅನಿರೀಕ್ಷಿತ, ಪ್ರತಿಕೂಲ ನಿಯಂತ್ರಣ ಆದೇಶಗಳನ್ನು ಹೊರಡಿಸುತ್ತಿರುವ ಅವರನ್ನು ಭೇಟಿ ಮಾಡಿ ಏನು ಪ್ರಯೋಜನ?’ ಎಂಬರ್ಥದಲ್ಲಿ ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಕೆಲ ಸಮಯದ ನಂತರ ಸುದ್ದಿಗಾರರ ಜತೆ ಮಾತನಾಡಿದ ಟ್ರಂಪ್, ‘ಜಿನ್ಪಿಂಗ್ ಜತೆಗಿನ ಭೇಟಿಯನ್ನು ರದ್ದುಗೊಳಿಸಿಲ್ಲ. ಆದರೆ ಭೇಟಿ ನಡೆಯುತ್ತದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ನಾನು ಸಮಾವೇಶಕ್ಕೆ ಹೋಗುತ್ತಿದ್ದೇನೆ. ಭೇಟಿ ನಡೆದರೂ ನಡೆಯಬಹುದು. ಇನ್ನೂ ಸಮಯವಿದೆ, ಅಷ್ಟರೊಳಗೆ ಸುಂಕ ಸಮರದ ತೀವ್ರತೆ ಕಡಿಮೆಯಾಗಬಹುದು. ಹಾಗಾಗಿಯೇ ನಾನು ನ. 1ರಿಂದ ಜಾರಿ ಎಂಬುದಾಗಿ ನಮೂದಿಸಿದ್ದೇನೆ’ ಎಂದು ಹೇಳಿದರು.
ಷೇರುಪೇಟೆ ಕುಸಿತ: ಟ್ರಂಪ್ ಅವರ ಈ ಘೊಷಣೆಯಿಂದಾಗಿ ಅಮೆರಿಕದ ಷೇರುಪೇಟೆ ಕುಸಿದಿದೆ. ಎಸ್ ಆಂಡ್ ಪಿ 500 ಷೇರು ಸೂಚ್ಯಂಕ ಶೇ. 2.7ರಷ್ಟು ಕುಸಿಯಿತು. ಏಪ್ರಿಲ್ನಿಂದ ಈವರೆಗಿನ ಅವಧಿಯಲ್ಲೇ ಇದು ಅತ್ಯಂತ ದೊಡ್ಡ ಕುಸಿತವಾಗಿದೆ.
ಏನಿದರ ಪರಿಣಾಮ?: ಟ್ರಂಪ್ ಘೊಷಣೆಯಿಂದ ಜಾಗತಿಕ ವ್ಯಾಪಾರ ಯುದ್ಧ ಮತ್ತೆ ಉಲ್ಬಣಗೊಳ್ಳಬಹುದು. ಚೀನಾದ ಸರಕುಗಳ ಮೇಲೆ ಈಗಾಗಲೇ ಶೇ. 30ರಷ್ಟು ಸುಂಕವನ್ನು ಟ್ರಂಪ್ ವಿಧಿಸಿದ್ದು, ಈ ಶೇ. 100 ಸೇರಿದರೆ ಒಟ್ಟು ಶೇ. 130 ಸುಂಕ ಆಗುತ್ತದೆ. ಇದರಿಂದ ಎರಡೂ ದೇಶಗಳ ನಡುವಿನ ಸಂಬಂಧ ಹದಗೆಡುವುದಲ್ಲದೆ, ಅವುಗಳ ಮಧ್ಯದ ವ್ಯಾಪಾರ ಸಂಬಂಧ ನಿಂತುಹೋಗುತ್ತದೆ. ಹೀಗಾಗಿ ಇದರ ಪರಿಣಾಮ ಇಡೀ ವಿಶ್ವ ವ್ಯಾಪಾರದ ಮೇಲೆ ಆಗಬಹುದು. ವಿಶ್ವಾದ್ಯಂತ ಆರ್ಥಿಕ ಬೆಳವಣಿಗೆ ಕುಸಿಯಬಹುದು ಎನ್ನುತ್ತಾರೆ ತಜ್ಞರು.
ಯುಟರ್ನ್ಗೆ ಟ್ರಂಪ್ ಹೆಸರುವಾಸಿ: ಟ್ರಂಪ್ ಘೊಷಣೆ ಖಚಿತವಾಗಿದೆಯಾದರೂ, ಇಂತಹ ಬೆದರಿಕೆಗಳನ್ನು ಒಡ್ಡಿದಷ್ಟೇ ಸುಲಭವಾಗಿ ಹಿಂತೆಗೆದುಕೊಂಡು ಉದಾಹರಣೆಗಳೂ ಸಾಕಷ್ಟಿವೆ. ಅದಲ್ಲದೆ, ಇಂತಹ ಕ್ರಮಗಳಿಂದ ಅಮೆರಿಕದ ಆರ್ಥಿಕತೆ ಮೇಲೆಯೇ ದೊಡ್ಡ ಪರಿಣಾಮ ಆಗಬಹುದು. ಈಗಾಗಲೇ ಅಮೆರಿಕದ ಉದ್ಯೋಗ ಮಾರುಕಟ್ಟೆ ದುರ್ಬಲವಾಗಿದೆ. ಹಣದುಬ್ಬರ ಇನ್ನಷ್ಟು ಹೆಚ್ಚಬಹುದು. ಸಂಸತ್ತಿನಲ್ಲಿ ಲೇಖಾನುದಾನ ಅಂಗೀಕಾರವಾಗದೆ ಇಡೀ ಸರ್ಕಾರ ಶಟ್ಡೌನ್ ಮೋಡ್ನಲ್ಲಿದೆ. ಸರ್ಕಾರಿ ನೌಕರರ ವಜಾದಂತಹ ಕ್ರಮವೂ ಅನಿವಾರ್ಯವಾಗಬಹುದು.
ಭಾರತೀಯ ರಫ್ತುದಾರರಿಗೆ ಲಾಭ
ಅಮೆರಿಕ-ಚೀನಾದ ಸುಂಕಸಮರ ಉಲ್ಬಣಗೊಂಡರೆ ಭಾರತೀಯ ರಫ್ತುದಾರರಿಗೆ ಲಾಭವಾಗಲಿದೆ. ಈ ಸನ್ನಿವೇಶವು ಅಮೆರಿಕದ ಬೇಡಿಕೆಯನ್ನು ಭಾರತದ ಕಡೆಗೆ ತಿರುಗಿಸಲಿದೆ. ಭಾರತದಿಂದ ಅಮೆರಿಕಕ್ಕೆ ರಫ್ತು ಪ್ರಮಾಣ ಹೆಚ್ಚಲಿದೆ ಎನ್ನುತ್ತಾರೆ ಫೆಡರೇಶನ್ ಆಫ್ ಇಂಡಿಯನ್ ಎಕ್ಸ್ಪೋರ್ಟ್ ಆರ್ಗನೈಸೇಶನ್ಸ್ ಅಧ್ಯಕ್ಷ ಎಸ್.ಸಿ. ರಾಲ್ಹಾನ್. ‘ಟ್ರಂಪ್ ಕ್ರಮದಿಂದ ಅಮೆರಿಕಕ್ಕೆ ಹಾನಿಯಾಗಲಿದೆ. ಆ ಎರಡೂ ಬೃಹತ್ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯಿಂದ ಇವಿ, ವಿಂಡ್ ಟರ್ಬೆನ್ಗಳು ಮತ್ತು ಸೆಮಿಕಂಡಕ್ಟರ್ ಭಾಗಗಳ ಬೆಲೆಗಳು ಹೆಚ್ಚಲಿವೆ. ಅಮೆರಿಕವು ಇಲೆಕ್ಟ್ರಾನಿಕ್ಸ್, ಜವಳಿ, ಶೂಗಳು, ವೈಟ್ಗೂಡ್ಸ್ ಮತ್ತು ಸೌರ ಫಲಕಗಳಿಗೆ ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಿದೆ’ ಎಂದು ಥಿಂಕ್ ಟ್ಯಾಂಕ್ ಜಿಟಿಆರ್ಐ ಅಭಿಪ್ರಾಯಪಟ್ಟಿದೆ.