

ನವದೆಹಲಿ: ಭಾರತವು ಅಮೆರಿಕ ಪರವಾಗಿ ಮಾತನಾಡದ ಕಾರಣ ನಿಮ್ಮ ನಿರ್ಧಾರಗಳನ್ನು ಜಗತ್ತಿಗೆ ಘೋಷಿಸಬೇಡಿ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor) ಅಧ್ಯಕ್ಷ ಟ್ರಂಪ್ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ, ರಷ್ಯಾದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಿದೆ ಎಂದು ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಗುರುವಾರ (ಅ.23) ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮಾತಾಡಿದ ತರೂರ್, ಭಾರತದ ನಿರ್ಧಾರಗಳ ಬಗ್ಗೆ ಟ್ರಂಪ್ ಘೋಷಣೆ ಮಾಡುವುದು ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ. ಭಾರತ ತನ್ನ ನಿರ್ಧಾರಗಳ ಬಗ್ಗೆ ಘೋಷಣೆ ಮಾಡುತ್ತದೆ. ಟ್ರಂಪ್ ಏನು ಮಾಡುತ್ತಾರೆಂದು ನಾವು ಜಗತ್ತಿಗೆ ಹೇಳುವುದಿಲ್ಲ. ಭಾರತ ಏನು ಮಾಡುತ್ತದೆ ಎಂದು ಟ್ರಂಪ್ ಜಗತ್ತಿಗೆ ಹೇಳಬಾರದು ಎಂದು ನಾನು ಭಾವಿಸುತ್ತೇನೆ ಎಂದು ಕಾಂಗ್ರೆಸ್ ಸಂಸದ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ವರ್ಷದ ಅಂತ್ಯದ ವೇಳೆಗೆ ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿದರು. ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂಭಾಷಣೆ ನಡೆಸಿರುವುದಾಗಿ ಹೇಳಿದ್ದಾರೆ. ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಪ್ರಧಾನಿ ಮೋದಿ ದೂರವಾಣಿ ಕರೆ ಮೂಲಕ ಭರವಸೆ ನೀಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷರು ಹೇಳಿಕೊಂಡ ಕೆಲವು ದಿನಗಳ ನಂತರ ಈ ಪ್ರತಿಕ್ರಿಯೆ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತವು ಯಾವುದೇ ಒಪ್ಪಂದವನ್ನು ನಿರಾಕರಿಸುತ್ತದೆ. ನಮ್ಮ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ತನ್ನ ಆದ್ಯತೆಯನ್ನು ಒತ್ತಿಹೇಳುತ್ತದೆ. ದೇಶದ ಇಂಧನ ನೀತಿಯು ಸ್ಥಿರ ಬೆಲೆಗಳು ಮತ್ತು ಸುರಕ್ಷಿತ ಪೂರೈಕೆಗಳಿಗೆ ಆದ್ಯತೆ ನೀಡುತ್ತದೆ. ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇ. 50 ರಷ್ಟು ಸುಂಕ ವಿಧಿಸಿ, ಇಂಧನ ಮೂಲಗಳನ್ನು ವೈವಿಧ್ಯಗೊಳಿಸುವಂತೆ ನವದೆಹಲಿಯನ್ನು ಒತ್ತಾಯಿಸಿದ ಹಿನ್ನೆಲೆಯಲ್ಲಿ ಇದು ಬಂದಿದೆ. (ಏಜೆನ್ಸೀಸ್)