

ಉಳ್ಳಾಲ: ಕುಸಿತದ ಭೀತಿಯಲ್ಲಿರುವ ಪೆಟ್ರೋಲ್ ಪಂಪ್ ತಡೆಗೋಡೆ, ಬಹುಮಹಡಿ ಕಟ್ಟಡಗಳಿಂದ ಬಹಿರಂಗವಾಗಿ ಹರಿಯುತ್ತಿರುವ ತ್ಯಾಜ್ಯ ನೀರಿನಿಂದಾಗಿ ತೊಂದರೆಗೀಡಾಗಿರುವ ಬೆಳ್ಮ ಗ್ರಾಮದ ಕಾನೆಕೆರೆ ನಾಗರಿಕರು ಬುಧವಾರ ಬೆಳ್ಮ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮನವಿ ಸ್ವೀಕರಿಸಲು ಆಗಮಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ಸ್ಥಳಕ್ಕೆ ಮೇಲಾಧಿಕಾರಿ ಬರುವಂತೆ ಪಟ್ಟು ಹಿಡಿದರು. ಅದರಂತೆ ಉಳ್ಳಾಲ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಗುರುದತ್ತ್ ಆಗಮಿಸಿ ಗ್ರಾಮಸ್ಥರ ಮನವಿ ಸ್ವೀಕರಿಸಿ ಫೆ.25ರಂದು ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮಸ್ಥರೊಂದಿಗೆ ಸಭೆ ನಡೆಸುವುದಾಗಿ ಹೇಳಿದರು.
ಜಿಲ್ಲೆಯ ಕಾರ್ಮಿಕ ಮುಖಂಡ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ದೇರಳಕಟ್ಟೆ ಜಂಕ್ಷನ್‌ನಲ್ಲಿ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪೆಟ್ರೋಲ್ ಪಂಪ್ ಹಿಂಭಾಗದಲ್ಲಿ ನಿರ್ಮಿಸಲಾಗಿರುವ ಎತ್ತರದ ತಡೆಗೋಡೆ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ. ಇದರ ಕೆಳಭಾಗದಲ್ಲಿ ದೇರಳಕಟ್ಟೆಯಿಂದ ರೆಂಜಾಡಿ, ಅಂಬ್ಲಮೊಗರು, ಪಾವೂರು, ಹರೇಕಳ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಜಿಲ್ಲಾಧಿಕಾರಿಗಳ ಆದೇಶದಂತೆ ಬಂದ್ ಮಾಡಿದೆ. ಇದರಿಂದ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ಮಾತ್ರವಲ್ಲದೆ ಪೆಟ್ರೋಲ್ ಪಂಪ್‌ಗೆ ಪಂಚಾಯಿತಿಯಿಂದ ಅನುಮತಿ ನೀಡಲಾಗಿಲ್ಲ ಎನ್ನುವ ಅನುಮಾನ ಇದೆ ಎಂದರು.
ಮುಖಂಡರಾದ ಸ್ಥಳೀಯ ಮಸೀದಿ ಖತೀಬ ಇಸಾಕ್ ಝುಹ್ರಿ, ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ಶೇಖರ್ ಕುಂದರ್, ರಫೀಕ್ ಹರೇಕಳ, ಇಬ್ರಾಹಿಂ ಮದಕ, ಮಹಮ್ಮದ್ ಅನ್ಸಾರ್, ರಜಾಕ್ ಮುಡಿಪು, ಅಸ್ಪಕ್ ಅಳೇಕಲ, ಬಶೀರ್, ಹೈದರ್, ಫಾರೂಕ್ ಕೊಣಾಜೆ, ಅಬೂಬಕ್ಕರ್ ಜಲ್ಲಿ ಭಾಗವಹಿಸಿದ್ದರು.
ಬೆಳ್ಮ ಗ್ರಾಪಂ, ಪೆಟ್ರೋಲ್ ಪಂಪ್ ಮಾಲೀಕರು, ತಡೆಗೋಡೆ ಕೆಳಭಾಗದಲ್ಲಿರುವ ಸಂತ್ರಸ್ತರನ್ನು ಕರೆದು ಹಿಂದೆ ಸಭೆ ನಡೆಸಿದ್ದರು. ಸಂತ್ರಸ್ತರಿಗೆ ಪರ್ಯಾಯ ಮನೆ ಒದಗಿಸುವ, ಅದರ ಬಾಡಿಗೆ ಹಣ ನೀಡುವುದಾಗಿ ಪೆಟ್ರೋಲ್ ಪಂಪ್ ಮಾಲೀಕರು ನೀಡಿದ್ದ ಭರವಸೆ ಇದುವರೆಗೂ ಈಡೇರಿಲ್ಲ ಎಂದರು. ಕೃಷ್ಣಪ್ಪ ಸಾಲ್ಯಾನ್, ರೈತ ಮುಖಂಡ. https://www.vijayavani.net/tumbe-kulala-seva-sangh-anniversary https://www.vijayavani.net/sarvajna-jayanti-celebration