ಆನೇಕೆರೆಯಲ್ಲಿ ತ್ರಿವಳಿ ರಥೋತ್ಸವ ಸಂಪನ್ನ

oplus_0
oplus_0
Published on

ಹಾಸನ: ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಆನೇಕೆರೆ ಗ್ರಾಮದಲ್ಲಿ ಸೋಮವಾರ ಪ್ರಾರಂಭವಾಗಿದ್ದ ದೊಡ್ಡಮ್ಮ-ಚಿಕ್ಕಮ್ಮ ದೇವಿಯ ಜಾತ್ರ ಮಹೋತ್ಸವ ಬುಧವಾರ ಸಂಪನ್ನಗೊಂಡಿತು.


ಮಂಗಳವಾರ ಸಂಜೆ ನೆರೆಯ ಗ್ರಾಮಗಳಾದ ಸಾಗತವಳ್ಳಿ ಹಾಗೂ ನಂಬಿಹಳ್ಳಿಯ ರಥಗಳನ್ನು ಅಲಂಕಾರ ಮಾಡಿ ಆನೇಕೆರೆ ಗ್ರಾಮಕ್ಕೆ ಕರೆತರಲಾಯಿಗಿತ್ತು. ಗ್ರಾಮಸ್ಥರಿಂದ ಪೂಜೆ ಸಲ್ಲಿಸಿದ ಬಳಿಕ ಈ ಎರಡು ರಥಗಳ ಜತೆ ಆನೇಕರೆ ಅಮ್ಮನವರ ರಥವನ್ನು ಗ್ರಾಮದ ಮಧ್ಯೆ ಭಾಗದಲ್ಲಿ ಎಳೆಯಲಾಗಿತ್ತು. ಇದೇ ವೇಳೆ ಹರಕೆ ಹೊತ್ತಿರುವ ಭಕ್ತರು ಮಡೆ, ಬಾಯಿಬೀಗ ಹಾಕಿಸಿಕೊಂಡು ಹರಕೆ ತೀರಿಸಿದರು. ಅಲ್ಲದೇ, ಸೋಮನ ಕುಣಿತ, ಗೊಂಬೆ ಕುಣಿತ ನಡೆಯಿತು. ವೀರಭದ್ರಸ್ವಾಮಿ ದೇವಾಲಯದ ಮುಂಭಾಗ ಭಕ್ತರು ಕೊಂಡ ಹಾಯ್ದು ಹರಕೆ ತೀರಿಸಿದರು.


ಬುಧವಾರ ಮುಂಜಾನೆ 6ಗಂಟೆಗೆ ಗ್ರಾಮದ ಮಧ್ಯಭಾಗದಲ್ಲಿ ನಿಲ್ಲಿಸಲಾಗಿದ್ದ ಮೂರು ರಥಗಳ ಪೈಕಿ ಸಾಗತವಳ್ಳಿ ಮತ್ತು ನಿಂಬಿಹಳ್ಳಿ ರಥಗಳಲ್ಲಿ ಸೋಮ ಮತ್ತು ಬೀರನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಆನೇಕೆರೆ ಗ್ರಾಮದ ರಥದಲ್ಲಿ ಅಮ್ಮನವರ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗಿತ್ತು. ಸಾವಿರಾರು ಭಕ್ತರ ಜೈಘೋಷದೊಂದಿಗೆ ಮೂರು ರಥಗಳನ್ನು ಎಳೆಯಲಾಯಿತು. ಮೂರು ರಥಗಳನ್ನು ಒಟ್ಟಿಗೆ ಆನೇಕೆರೆ ಅಮ್ಮನವರ ದೇವಸ್ಥಾನದ ಸುತ್ತ ಪ್ರದಕ್ಷಣೆ ಹಾಕಿ ಸಂಪನ್ನಗೊಳಿಸಲಾಯಿತು.


ವಿಧಾನಪರಿಷತ್ತು ಸದಸ್ಯ ಡಾ.ಸೂರಜ್ ರೇವಣ್ಣ ರಥೋತ್ಸವದಲ್ಲಿ ಭಾಗಿಯಾಗಿದ್ದರು. ಇನ್ನು ಜಾತ್ರೆಯ ಸಕಲ ಸಿದ್ಧತೆಯ ಜವಾಬ್ದಾರಿಯನ್ನು ಗುಡಿಗೌಡ ಭಕ್ತರಾಮೇಗೌಡ ವಹಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net