ಮೌಲ್ಯಾಧಾರಿತ ಜೀವನ ಎಲ್ಲರಿಗೂ ಪ್ರೇರಣೆ : ಸತೀಶ್ ಕುಂಪಲ ಚಿಂತನೆ

26
Published on

ಉಳ್ಳಾಲ: ಗುರುಪೂರ್ಣಿಮೆಯ ಪ್ರಯುಕ್ತ ತೊಕ್ಕೊಟಿನ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ನಿವೃತ್ತ ಶಿಕ್ಷಕ, ಪ್ರಗತಿಪರ ಕೃಷಿಕ ಪಿಲಾರು ಸುಬ್ರಾಯ ಗಟ್ಟಿ-ಪಾರ್ವತಿ ದಂಪತಿಗೆ ಸ್ವಗೃಹದಲ್ಲಿ ಗುರುವಂದನೆ ಸಲ್ಲಿಸಲಾಯಿತು.

ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಹಿಂದು ಧರ್ಮದಲ್ಲಿ ಗುರುವಿಗೆ ಮಹತ್ತರವಾದ ಸ್ಥಾನವಿದೆ. ಸುಬ್ರಾಯ ಗಟ್ಟಿ ಅವರ ಮೌಲ್ಯಾಧಾರಿತ ಜೀವನ ನಮಗೆಲ್ಲರಿಗೂ ಪ್ರೇರಣೆ. 95ರ ಹಿರಿತನದಲ್ಲೂ ಅವರ ಸದೃಢ ಆರೋಗ್ಯ, ಶ್ರವಣ ಶಕ್ತಿ, ಶಿಸ್ತುಬದ್ಧ ಜೀವನ ಕಿರಿಯರಾದ ನಮಗೆಲ್ಲರಿಗೂ ಪಾಠ ಎಂದರು.

ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಪ್ರತಿಷ್ಠಾನ ರಾಷ್ಟ್ರಭಕ್ತನ ಹೆಸರಿಗೆ ತಕ್ಕಂತೆ ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯ ಮಾಡಿಕೊಂಡು ಬರುತ್ತಿರುವ ಸಂಸ್ಥೆ. ವಿಜಯ ಸಿಂಧೂರ ಸಾಹಸದಂತಹ ರಾಷ್ಟ್ರ ಜಾಗೃತಿ ಕಾರ್ಯಕ್ರಮ ಮೂಲಕ ಮಕ್ಕಳಲ್ಲಿ ದೇಶಭಕ್ತಿ ಜಾಗರಣೆ, ಗುರುವಂದನೆ ಕಾರ್ಯಕ್ರಮ ಮೂಲಕ ಸಂಸ್ಕಾರ ಬೆಳೆಸುತ್ತಿದೆ ಎಂದು ಶ್ಲಾಘಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ರಾಕೇಶ್ ಕುಮಾರ್, ಗುರುವಂದನೆ ಸಂಚಾಲಕ ರಾಜೇಂದ್ರ ಸೇವಂತಿಗುಡ್ಡೆ, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಪ್ರಮುಖರಾದ ಮೋಹನ್ ಸಾಲ್ಯಾನ್, ದಾಮೋದರ ನಡಾರ್, ಶರತ್ ಶೆಟ್ಟಿ ಪನೀರ್, ದೀಕ್ಷಿತ್ ನಿಸರ್ಗ, ಸುಧಾಕರ್ ಬಜಾಲ್, ಗಂಗಾಧರ ಅಂಬ್ಲಮೊಗರು, ಬೃಜೇಶ್ ನಾಯರ್ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಪ್ರವೀಣ್ ಬಸ್ತಿ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪೊನ್ನೊತೋಡು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net