

ಲಂಡನ್: ಈಶ ಫೌಂಡೇಷನ್ನ ಸದ್ಗುರು ಹಮ್ಮಿಕೊಂಡಿರುವ ಮಣ್ಣು ರಕ್ಷಿಸಿ ಅಭಿಯಾನಕ್ಕೆ ನಿನ್ನೆಯಷ್ಟೇ ಲಂಡನ್ನಲ್ಲಿ ಚಾಲನೆ ಸಿಕ್ಕಿದ್ದು, ಸದ್ಗುರು ಬೈಕ್ ರ‌್ಯಾಲಿ ಮೂಲಕ ನೂರು ದಿನಗಳಲ್ಲಿ 27 ರಾಷ್ಟ್ರಗಳಲ್ಲಿ ಒಟ್ಟು 32 ಸಾವಿರ ಕಿ.ಮೀ. ಪ್ರಯಾಣಿಸಿ ಜಾಗೃತಿ ಮೂಡಿಸಲು ಹೊರಟಿದ್ದಾರೆ. ಹೀಗೆ ಹೊರಟಿರುವ ಅವರು ಇಂದು ಲಂಡನ್ನಲ್ಲಿನ ಬಸವೇಶ್ವರ ಪುತ್ಥಳಿಗೆ ನಮಿಸಿ ತಮ್ಮ ಗೌರವಾದರಗಳನ್ನು ಸಮರ್ಪಿಸಿದ್ದಾರೆ.
ಲಂಡನ್ನ ಲ್ಯಾಂಬೆತ್ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಅವರು ಸದ್ಗುರು ಅವರ ಮಣ್ಣು ರಕ್ಷಿಸಿ ಅಭಿಯಾನಕ್ಕೆ ಬೆಂಬಲಿಸಿ ಅವರನ್ನು ಸ್ವಾಗತ ಕೋರಿದರು. ಬಸವೇಶ್ವರ ಪುತ್ಥಳಿಗೆ ವಿಭೂತಿಯನ್ನು ಹಚ್ಚಿದ ಸದ್ಗುರು, ಬ್ರಿಟಿಷ್ ಸಂಸತ್ತಿನ ಎದುರು ಬಸವೇಶ್ವರರ ಪುತ್ಥಳಿಯ ದರ್ಶನ ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಸಂತೋಷ ವ್ಯಕ್ತಪಡಿಸಿದರು.
ಲಂಡನ್ ಥೇಮ್ಸ್ ನದಿಯ ತೀರದಲ್ಲಿ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ ಈ ಬಸವೇಶ್ವರ ಪುತ್ಥಳಿಯನ್ನು ಸ್ಥಾಪಿಸಿತ್ತು. ಸದ್ಗುರು ಅವರ ಮಣ್ಣು ರಕ್ಷಿಸಿ ಅಭಿಯಾನದಲ್ಲಿ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ ಕೂಡ ಭಾಗಿಯಾಗಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ನೀರಜ್ ಪಾಟೀಲ್ ಹೇಳಿದರು.