ಅಣ್ಣಂದಿರ ಪ್ರೀತಿಗೆ ಕಣ್ಣೀರಾದ ತಂಗಿ: ಲೂಧಿಯಾನದ ಸಹೋದರರಿಂದ 50 ಲಕ್ಷದ ಮನೆ ಗಿಫ್ಟ್! ವಿಡಿಯೋ ವೈರಲ್.. Viral Video

ತಂಗಿಗೆ 50 ಲಕ್ಷದ ಮನೆ ಗಿಫ್ಟ್​ ಕೊಟ್ಟ ಸಹೋದರರು
ತಂಗಿಗೆ 50 ಲಕ್ಷದ ಮನೆ ಗಿಫ್ಟ್​ ಕೊಟ್ಟ ಸಹೋದರರು
Published on

ಪ್ರಮುಖ ಮುಖ್ಯಾಂಶಗಳು

  • ತಂಗಿಗೆ 50 ಲಕ್ಷದ ಮನೆ ಗಿಫ್ಟ್​ ಕೊಟ್ಟ ಸಹೋದರರು
  • ಗಿಫ್ಟ್​ ನೋಡಿ ಭಾವುಕಳಾದ ತಂಗಿ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ಲೂಧಿಯಾನ: ಅಣ್ಣ-ತಂಗಿ ಸಂಬಂಧ ಅಂದ್ರೆ ಹಾಗೇನೆ, ಜಗಳವಾಡಿದ್ರೂ ಒಬ್ಬರನ್ನೊಬ್ಬರು ಬಿಟ್ಟಿರಲಾರರು. ಆದರೆ ಪಂಜಾಬ್‌ನ ಲೂಧಿಯಾನದಲ್ಲಿ ನಡೆದ ಈ ಒಂದು ಘಟನೆ (Viral Video) ಮಾತ್ರ ಇಡೀ ದೇಶದ ಜನರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ.
ತಂದೆಯ ಮರಣದ ನಂತರ ತಂಗಿಯೇ ನಮ್ಮ ಸರ್ವಸ್ವ ಎಂದು ಭಾವಿಸಿದ ಇಬ್ಬರು ಅಣ್ಣಂದಿರು, ಆಕೆಗೆ ನೀಡಿದ ಬಂಪರ್ ಗಿಫ್ಟ್ ಈಗ ಸೋಷಿಯಲ್​ ಮೀಡಿಯಾನಲ್ಲಿ ಭಾರಿ ಸದ್ದು ಮಾಡುತ್ತಿದೆ.

ತಂಗಿಗಾಗಿ 50 ಲಕ್ಷದ ಅರಮನೆ!

ಲೂಧಿಯಾನದ ಈ ಇಬ್ಬರು ಸಹೋದರರು ತಮ್ಮ ಒಬ್ಬಳೇ ತಂಗಿಗೆ ಬರೋಬ್ಬರಿ 50 ಲಕ್ಷ ರೂಪಾಯಿ ಮೌಲ್ಯದ, 175 ಗಜ ವಿಸ್ತೀರ್ಣದ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಕೇವಲ ಮನೆ ಕೊಡಿಸುವುದು ದೊಡ್ಡದಲ್ಲ, ಅದನ್ನು ತಂಗಿಗೆ ತಿಳಿಸಿದ ರೀತಿ ನಿಜಕ್ಕೂ ಎಂತವರನ್ನೂ ಭಾವುಕರನ್ನಾಗಿಸುತ್ತದೆ.
ಸರ್‌ಪ್ರೈಸ್ ಕಂಡು ಬಿಕ್ಕಿ ಬಿಕ್ಕಿ ಅತ್ತ ಸಹೋದರಿ
ವೈರಲ್ ಆಗಿರುವ ವಿಡಿಯೋದಲ್ಲಿ, ಅಣ್ಣಂದಿರು ತಮ್ಮ ತಂಗಿಯನ್ನು ಹೊಸ ಮನೆಯ ಮುಂದೆ ಕರೆತರುತ್ತಾರೆ. ಹೊರಗಡೆ ಡ್ರಮ್ಸ್, ತುತ್ತೂರಿಗಳ ಸದ್ದು ಮೊಳಗುತ್ತಿರುತ್ತದೆ. ಮೆರವಣಿಗೆಯಲ್ಲಿ ತಂಗಿಯನ್ನು ಕರೆತಂದು, ಈ ಹೊಸ ಮನೆ ಇನ್ಮುಂದೆ ನಿನ್ನದು ಎಂದು ಹೇಳಿ ಆ ಮನೆಯ ಪತ್ರಗಳನ್ನು ಕೈಗಿಡುತ್ತಾರೆ. ಇದನ್ನು ನಿರೀಕ್ಷಿಸದ ತಂಗಿ, ಆ ಕ್ಷಣದಲ್ಲೇ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾಗದೆ ಅಣ್ಣಂದಿರನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾಳೆ. ಈ ದೃಶ್ಯ ಈಗ ಲಕ್ಷಾಂತರ ಜನರ ಹೃದಯ ಗೆದ್ದಿದೆ.

ತಂದೆಯ ಸ್ಥಾನದಲ್ಲಿ ನಿಂತು ಹೊಣೆ ನಿಭಾಯಿಸಿದ ಅಣ್ಣಂದಿರು

ವರದಿಗಳ ಪ್ರಕಾರ, ಈ ಕುಟುಂಬದಲ್ಲಿ ತಂದೆಯ ನಿಧನದ ನಂತರ ಅಣ್ಣಂದಿರೇ ಈ ತಂಗಿಗೆ ತಂದೆ ಸ್ಥಾನವನ್ನು ತುಂಬಿದ್ದರು. ಆಕೆಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ದೃಢನಿಶ್ಚಯ ಮಾಡಿದ್ದ ಇವರು, ಈ ಹಿಂದೆ ತಂಗಿಗೆ ಕಾರು ಮತ್ತು ಅನೇಕ ದುಬಾರಿ ಉಡುಗೊರೆಗಳನ್ನು ನೀಡಿದ್ದರು. ಆದರೆ ಈಗ ಸ್ವಂತ ಮನೆಯನ್ನೇ ಉಡುಗೊರೆಯಾಗಿ ನೀಡುವ ಮೂಲಕ ತಂದೆಯ ನಂತರ ನಾವು ನಿನಗೆ ಆಸರೆಯಾಗಿರುತ್ತೇವೆ ಎಂಬ ಮಾತನ್ನು ಸಾಬೀತುಪಡಿಸಿದ್ದಾರೆ.

ನೆಟ್ಟಿಗರ ಮೆಚ್ಚುಗೆಯ ಮಹಾಪೂರ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಾವುಕರಾಗಿ ಕಮೆಂಟ್ ಮಾಡುತ್ತಿದ್ದಾರೆ. ದುಡ್ಡು ಎಲ್ಲರೂ ಮಾಡ್ತಾರೆ, ಆದ್ರೆ ಇಂತಹ ದೊಡ್ಡ ಮನಸ್ಸು ಮಾಡೋರು ತುಂಬಾ ಕಡಿಮೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇದು ಬರಿ ಮನೆಯಲ್ಲ, ಅಣ್ಣಂದಿರ ಪ್ರೀತಿಯ ಅರಮನೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನು ಕೆಲವು ಸಹೋದರಿಯರು ನಮಗೂ ಇಂತಹ ಅಣ್ಣಂದಿರು ಸಿಗಲಿ ಎಂದು ಬರೆದುಕೊಂಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net