ಆಕಾಶದಲ್ಲೇ ಅರಳಿದ ಮೋನಾಲಿಸಾ! 4 ಗಂಟೆಯ ಪ್ರಯಾಣದಲ್ಲೇ ಕಲಾವಿದನಾದ ಪೈಲಟ್​ನ​ ವಿಡಿಯೋ ವೈರಲ್ | ​Mona Lisa

'ಏರ್ ನ್ಯಾವ್ ರಾಡಾರ್' (AirNav Radar) ಹಂಚಿಕೊಂಡಿರುವ ವಿಮಾನ ಹಾರಾಟದ 3D ಮಾರ್ಗದ ನಕ್ಷೆಯಲ್ಲಿ ಈ ಚಿತ್ರ ಹೇಗೆ ಹಂತ ಹಂತವಾಗಿ ರೂಪುಗೊಂಡಿತು ಎಂಬುದು ಸ್ಪಷ್ಟವಾಗಿ ಸೆರೆಯಾಗಿದೆ.
 ​Mona Lisa
ಆಕಾಶದಲ್ಲೇ ಅರಳಿದ ಮೋನಾಲಿಸಾ
Published on

ಅಮೆರಿಕ: ಖ್ಯಾತ ಇಟಾಲಿಯನ್​ ಮಹಾನ್​ ಕಲಾವಿದ ಲಿಯೊನಾರ್ಡೊ ಡಾ ವಿನ್ಸಿ ಅವರ ವಿಶ್ವವಿಖ್ಯಾತ 'ಮೋನಾಲಿಸಾ' (Mona Lisa) ಪೇಂಟಿಂಗ್​ ಈಗ ಆಕಾಶದಲ್ಲಿ ಅರಳಿದ ವಿಡಿಯೋ ಸದ್ಯ ಹಲವರ ಹುಬ್ಬೇರಿಸಿದೆ. 4 ಗಂಟೆಯ ಪ್ರಯಾಣದ ವೇಳೆ ವಿಮಾನದ ಮಾರ್ಗವನ್ನೇ ಬಳಸಿಕೊಂಡು ಮೋನಾಲಿಸಾ ಚಿತ್ರವನ್ನು ರಚಿಸಿದ ಪೈಲಟ್​ನ ಕಲೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಶುಕ್ರವಾರ (ಸೆ.18) ಬೆಳಗ್ಗೆ ಅಮೆರಿಕದ ಒಕ್ಲಹೋಮ ಮತ್ತು ಅರ್ಕಾನ್ಸಾಸ್ ವಾಯುಪ್ರದೇಶದಲ್ಲಿ ಈ ಅದ್ಭುತ ಕಲೆ ಮೂಡಿಬಂದಿದ್ದು, ಇದರ ಮಾರ್ಗದ ನಕ್ಷೆಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. 'ಏರ್ ನ್ಯಾವ್ ರಾಡಾರ್' (AirNav Radar) ಹಂಚಿಕೊಂಡಿರುವ ವಿಮಾನ ಹಾರಾಟದ 3D ಮಾರ್ಗದ ನಕ್ಷೆಯಲ್ಲಿ ಈ ಚಿತ್ರ ಹೇಗೆ ಹಂತ ಹಂತವಾಗಿ ರೂಪುಗೊಂಡಿತು ಎಂಬುದು ಸ್ಪಷ್ಟವಾಗಿ ಸೆರೆಯಾಗಿದೆ.

ಅರ್ಕಾನ್ಸಾಸ್‌ನ ಬೆಂಟನ್‌ವಿಲ್ಲೆಯಿಂದ ಸೆಸ್ನಾ ಆರ್182 ಸ್ಕೈಲೇನ್ ಆರ್‌ಜಿ (Cessna R182 Skylane RG) ಎಂಬ ಸಣ್ಣ ವಿಮಾನವನ್ನು ಟೇಕಾಫ್ ಮಾಡಿದ ಪೈಲಟ್, ಮೋನಾಲಿಸಾ ಅವರ ಮುಖವನ್ನು ಪೂರ್ಣಗೊಳಿಸಲು ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಆಕಾಶದಲ್ಲಿ ವಿಮಾನವನ್ನು ಹಾರಿಸಿದ್ದಾರೆ ಎಂದು ಫ್ಲೈಟ್ ಡೇಟಾ ಮಾಹಿತಿ ನೀಡಿದೆ.

ಪೈಲಟ್ ಜತೆಗೆ ಅದ್ಭುತ ಕಲಾವಿದ

ಈ ವಿಮಾನವು ಖಾಸಗಿಯಾಗಿದ್ದು, ಬೆಂಜಮಿನ್ ಮೆಕ್‌ಡೇನಿಯಲ್ (Benjamin McDaniel) ಎಂಬುವವರ ಹೆಸರಿನಲ್ಲಿದೆ. ತಮ್ಮನ್ನು ತಾವು ಪೈಲಟ್ ಮಾತ್ರವಲ್ಲದೆ, ಓರ್ವ ಕಲಾವಿದ ಎಂದೂ ಗುರುತಿಸಿಕೊಳ್ಳುವ ಬೆಂಜಮಿನ್, ಆಗಸದಲ್ಲಿ ವಿಮಾನವನ್ನು ಹಾರಿಸುವ ಮೂಲಕ ಚಿತ್ರಗಳನ್ನು ಬಿಡಿಸುವುದರಲ್ಲಿ ಪ್ರವೀಣರು ಎಂಬುದನ್ನು ಸಾಬೀತುಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ @thepilotpicasso ಖಾತೆಯಲ್ಲಿ ಇಂತಹ ವಿನೂತನ ಕಲೆಯನ್ನು ಅವರು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net