ವಯಸ್ಸು ಕೇವಲ ನಂಬರ್ ಅಷ್ಟೇ: ಹೆದ್ದಾರಿಯಲ್ಲಿ ಹಕ್ಕಿಯಂತೆ ಕಾರ್ ಓಡಿಸುವ ವಿದ್ಯಾ ಕೌರ್​ ವಿಡಿಯೋ ವೈರಲ್​! Vidya Kaur

ವಿದ್ಯಾ ಕೌರ್​ (Vidya Kaur)
ವಿದ್ಯಾ ಕೌರ್​ (Vidya Kaur)
Published on
ಜಮ್ಮು- ಕಾಶ್ಮೀರ: ಸಾಮಾನ್ಯವಾಗಿ ನಮ್ಮಲ್ಲಿ 60 ವರ್ಷ ದಾಟಿದವರಿಗೆ ಕೆಲಸ ಮಾಡುವುದನ್ನು ನಿಲ್ಲಿಸಿ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳುತ್ತೆವೆ. ಅದರಲ್ಲೂ ಮಹಿಳೆಯರ ವಿಷಯಕ್ಕೆ ಬಂದರೆ, 60 ದಾಟಿದ ಅಜ್ಜಿಯರಿಗೆ ಮೊಮ್ಮಕಳೊಂದಿಗೆ ಆಟ ಮತ್ತು ದೇವರ ಧ್ಯಾನಕ್ಕೆ ಸೀಮಿತವಾಗಿರುತ್ತಾರೆ. ಅದರೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಈ ಜಮ್ಮುವಿನ 72 ವರ್ಷದ ಮಾಜಿ ಪ್ರಾಂಶುಪಾಲೆ ವಿದ್ಯಾ ಕೌರ್​ (Vidya Kaur) ಅವರು ಮಾಡುವ ಕೆಲಸವನ್ನು ನೀವು ನೋಡಿದರೆ ಶಾಕ್​ ಆಗುವುದು ಗ್ಯಾರಂಟಿ.
ವಿದ್ಯಾ ಅವರ ವಯಸ್ಸಿನವರು ಮನೆಯಲ್ಲಿ ಆರಾಮವಾಗಿ ಕುಳಿತುಕೊಳ್ಳುವ ಸಮಯದಲ್ಲಿ, ವಿದ್ಯಾ ಜಮ್ಮುವಿನ ಅಸ್ತವ್ಯಸ್ತವಾಗಿರುವ ಟ್ರಾಫಿಕ್‌ನಲ್ಲಿ ಅತ್ಯಂತ ಲೀಲಾಜಾಲವಾಗಿ ಕಾರು ಚಲಾಯಿಸುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

19ನೇ ವಯಸ್ಸಿನಲ್ಲಿ ಮದುವೆ, 40 ವರ್ಷಗಳ ಸೇವೆ

ವಿದ್ಯಾ ಜೀವನವೇನು ಸದಾ ಸಂತೋಷದಿಂದ ಕೂಡಿರಲಿಲ್ಲ. 19ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರು, ನಂತರ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿ ಸತತ 40 ವರ್ಷಗಳ ಕಾಲ ಶಾಲಾ ಪ್ರಾಂಶುಪಾಲರಾಗಿ ಕೆಲಸ ಮಾಡಿದರು. ಸಾವಿರಾರು ಮಕ್ಕಳ ಭವಿಷ್ಯ ರೂಪಿಸಿದ ಅವರಿಗೆ ಮನಸ್ಸಿನ ಒಂದು ಮೂಲೆಯಲ್ಲಿ ಡ್ರೈವಿಂಗ್ ಕಲಿಯಬೇಕೆಂಬ ಹಂಬಲ ದಶಕಗಳಿಂದ ಹಾಗೆಯೇ ಇತ್ತು.
ನಿವೃತ್ತಿಯ ನಂತರದ ಶಾಂತ ಜೀವನ ಅವರಿಗೆ ಸ್ವಲ್ಪ ಬೇಸರ ತರಿಸಿತು. ಅಂದುಕೊಂಡಿದ್ದನ್ನು ಸಾಧಿಸಲು ಇದುವೇ ಸರಿಯಾದ ಸಮಯ ಎಂದು ನಿರ್ಧರಿಸಿ 60ನೇ ವಯಸ್ಸಿನಲ್ಲಿ ಡ್ರೈವಿಂಗ್ ಶಾಲೆಗೆ ಹೋದರು.

ನಿಮ್ಮಿಂದ ಆಗಲ್ಲ ಎಂದವರಿಗೆ ವಿದ್ಯಾ ಖಡಕ್ ಆನ್ಸ್​ರ್​!

ವಿದ್ಯಾ ಅವರು ಮೊದಲು ಡ್ರೈವಿಂಗ್ ಸ್ಕೂಲ್‌ಗೆ ಹೋದಾಗ ಅಲ್ಲಿನ ಬೋಧಕರು ಅವರಿಗೆ ನಿರುತ್ಸಾಹದ ಮಾತುಗಳನ್ನೇ ಆಡಿದ್ದರು. ನಿಮ್ಮ ವಯಸ್ಸಿಗೆ ಈ ಟ್ರಾಫಿಕ್ ನಿಭಾಯಿಸುವುದು ಕಷ್ಟ, ನೀವು ಕಲಿಯುವುದು ಅಸಾಧ್ಯ ಎಂದೆಲ್ಲಾ ಹೇಳಿ ಅವರನ್ನು ವಾಪಸ್ ಕಳುಹಿಸಲು ಯತ್ನಿಸಿದ್ದರು. ಆದರೆ ವಿದ್ಯಾ ಸುಮ್ಮನೆ ಕೂರಲಿಲ್ಲ.
ಅವರು ಮಾಡಿದ ಮೊದಲ ಕೆಲಸವೇ ಒಂದು ಹೊಸ ಕಾರನ್ನು ಖರೀದಿಸಿದ್ದು. ಅವರು ಧೃತಿಗೆಡದೆ ತಮ್ಮ ನೆರೆಹೊರೆಯವರ ಸಹಾಯ ಪಡೆದು ಪ್ರತಿದಿನ ಅಭ್ಯಾಸ ನಡೆಸಿದರು. ಕ್ಲಚ್ ಕಂಟ್ರೋಲ್, ಗೇರ್ ಶಿಫ್ಟಿಂಗ್ ಎಲ್ಲವನ್ನೂ ಪಟ್ಟು ಹಿಡಿದು ಕಲಿತರು. ಕೇವಲ ಒಂದು ತಿಂಗಳ ಅವಧಿಯಲ್ಲಿ ಅವರು ರಸ್ತೆಯ ಮೇಲೆ ಹಕ್ಕಿಯಂತೆ ಕಾರು ಹಾರಿಸತೊಡಗಿದರು. ತಮಗೆ ಆಗಲ್ಲ ಎಂದವರಿಗೆ ತಮ್ಮ ಡ್ರೈವಿಂಗ್ ಮೂಲಕವೇ ತಕ್ಕ ಉತ್ತರ ನೀಡಿದರು.

ಸೋಷಿಯಲ್ ಮೀಡಿಯಾದಲ್ಲಿ 'ದಾದಿ' ಸೂಪರ್ ಸ್ಟಾರ್!

ವಿದ್ಯಾ ಅವರ ಮೊಮ್ಮಗ ವಿಶಾಲ್ (@vishal__riderz_jk14) ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಅಜ್ಜಿಯ ಡ್ರೈವಿಂಗ್ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ವಾಹನಗಳಿಂದ ಕಿಕ್ಕಿರಿದಿರುವ ಹೆದ್ದಾರಿಗಳಲ್ಲಿ ಅಜ್ಜಿ ಅತ್ಯಂತ ಆತ್ಮವಿಶ್ವಾಸದಿಂದ ಕಾರು ಓಡಿಸುವುದನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಸಾವಿರಾರು ಜನರು ಇವರ ವೀಡಿಯೊ ನೋಡಿ ಸ್ಫೂರ್ತಿ ಪಡೆಯುತ್ತಿದ್ದಾರೆ. ಹೈವೇಗಳಲ್ಲಿ ಚುರುಕಾದ ವೇಗ ಕಾಯ್ದುಕೊಳ್ಳುವ ವಿದ್ಯಾ ಅವರು, ವಯಸ್ಸಾದ ಮೇಲೆ ಲೈಫ್ ಮುಗಿದುಹೋಯಿತು ಎಂದುಕೊಳ್ಳುವವರಿಗೆ ಹೊಸ ಭರವಸೆ ನೀಡುತ್ತಿದ್ದಾರೆ.

ವಯಸ್ಸು ವೇಗದ ಮಿತಿಯಲ್ಲ, ಅದು ಕೇವಲ ಒಂದು ಮೈಲಿಗಲ್ಲು

ಇತ್ತೀಚಿನ ದಿನಗಳಲ್ಲಿ 80ರ ಹರೆಯದಲ್ಲಿ ಮ್ಯಾರಥಾನ್ ಓಡುವ ಅಜ್ಜಿಯರು, ತಂತ್ರಜ್ಞಾನದಲ್ಲಿ ಪಳಗಿದ ಅಜ್ಜಿಯರ ಸಂಖ್ಯೆ ಹೆಚ್ಚುತ್ತಿದೆ. ವಿದ್ಯಾ ಕೌರ್ ಅವರ ಈ ಕಥೆ ನಮಗೆ ಕಲಿಸುವ ಪಾಠ ಏನೆಂದರೆ ಕನಸು ಕಾಣಲು ಮತ್ತು ಅದನ್ನು ನನಸು ಮಾಡಲು ಯಾವುದೇ ವಯಸ್ಸು ತಡವಲ್ಲ. ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ ಅಷ್ಟೇ, ಅದು ಎಂದಿಗೂ ನಿಮ್ಮ ವೇಗಕ್ಕೆ ತಡೆಯೊಡ್ಡುವ ರೋಡ್ ಬ್ರೇಕರ್ ಅಲ್ಲವೇ ಅಲ್ಲ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net