ಈ ತಾಲೂಕಿನಲ್ಲಿ ಕಳೆದ ನಾಲ್ಕುವರೆ ವರ್ಷದಲ್ಲಿ 14 ತಹಶೀಲ್ದಾರ್​ಗಳ ವರ್ಗಾವಣೆ!

shivamogga dc office
Published on

ಶಿವಮೊಗ್ಗ: ಒಂದು ತಾಲೂಕಿನಲ್ಲಿ ತಹಶೀಲ್ದಾರರನ್ನು ಅಬ್ಬಬ್ಬಾ ಎಂದರೆ ಎಷ್ಟು ಸಾರಿ ವರ್ಗಾವಣೆ ಮಾಡಬಹುದಪ್ಪಾ? ಮೂರು-ನಾಲ್ಕು ಬಾರಿ? ಈ ತಾಲೂಕಿನಲ್ಲಿ ಮಾತ್ರ ಕಳೆದ ನಾಲ್ಕುವರೆ ವರ್ಷಗಳಲ್ಲಿ 14 ತಹಶೀಲ್ದಾರರನ್ನು ವರ್ಗಾವಣೆ ಮಾಡಲಾಗಿದೆ.

ಈ ಪ್ರಕರಣ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿಲ್ಲಿ ನಡೆದಿದ್ದು ಕಂದಾಯ ಇಲಾಖೆ ನೌಕರಲ್ಲಿ ಅಸಮಾಧಾನ ಉಂಟಾಗಿದೆ. ಈಗಾಗಲೇ 14 ತಹಶೀಲ್ದಾರ್ ಗಳ ವರ್ಗಾವಣೆಯಾಗಿದ್ದು ತಹಶೀಲ್ದಾರ್ ಜೊತೆಗೆ ಮತ್ತೆ 3 ಅಧಿಕಾರಿ -ಸಿಬ್ಬಂದಿ ವರ್ಗಾವಣೆಗಾಗಿ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆ ಕಂದಾಯ ಇಲಾಖೆಯ ನೌಕರರ ಸಂಘ ಪ್ರತಿಭಟನೆ ನಡೆಸಿದೆ.

ಸೊರಬ ತಾಲೂಕಿನಲ್ಲಿ ಇಲಾಖೆಯ ವರ್ಗಾವಣೆ ಹೆಚ್ಚಾದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ನೌಕರರು ತಮ್ಮ ಸಂಘದ ಮೂಲಕ ಶಿವಮೊಗ್ಗದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಈ ರೀತಿ ಅನಗತ್ಯ ವರ್ಗಾವಣೆಯ ಮೂಲಕ‌ ನೌಕರರ ಆತ್ಮಸ್ಥೈರ್ಯ ಕುಗ್ಗಿಸದಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದು ಸೊರಬ ಶಾಸಕ ಕುಮಾರ್ ಬಂಗಾರಪ್ಪ ಹಾಗೂ ಪಿಎ ಉಮೇಶ್ ವಿರುದ್ಧ ನೌಕರರು ಆಕ್ರೋಶ ಹೊರಹಾಕಿದ್ದಾರೆ.

ಹೀಗೆಯೇ ನೌಕರರ ವರ್ಗಾವಣೆ ಮುಂದುವರಿದರೆ ಎಲ್ಲಾ ನೌಕರರು ಸಾಮೂಹಿಕವಾಗಿ ರಜೆ ಹಾಕಿ, ಪ್ರತಿಭಟನೆ ನಡೆಸುವ ಎಚ್ಚರಿಕೆ ಕೂಡ ಕಂದಾಯ ಇಲಾಖೆ ನೌಕರರ ಸಂಘ ನಿಡಿದೆ. ಸದ್ಯ, ಶಿವಮೊಗ್ಗದ ಜಿಲ್ಲಾಧಿಕಾರಿಯ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಂದಾಯ ಇಲಾಖೆ ನೌಕರರು ಮನವಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net