

ಬೆಳ್ತಂಗಡಿ: ಶಿಕ್ಷಣ ದೊಡ್ಡ ಶಕ್ತಿಯಾಗಿದ್ದು, ಜ್ಞಾನದ ಜತೆಗೆ ಜೀವನ ಕೌಶಲಗಳನ್ನು ಹೊಂದಿ ಸಮಾಜವನ್ನು ಎದುರಿಸುವ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಮೈಗೂಡಿಸಿಕೊಳ್ಳಬೇಕು ಎಂದು ಉಜಿರೆ ಎಸ್ಡಿಎಂ ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಹೇಳಿದರು.
ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ನೂತನವಾಗಿ ಸೇರ್ಪಡೆಗೊಂಡ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಶನಿವಾರ ಎರಡು ದಿನಗಳ ಪ್ರಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ.ಜೋಸೆಫ್ ಎನ್.ಎಂ ಮಾತನಾಡಿದರು. ಎಸ್ಡಿಎಂ ಕಾಲೇಜು ಪ್ರಾಂಶುಪಾಲ ಡಾ.ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂ ಎಜುಕೇಶನಲ್ ಸೊಸೈಟಿ ಶೈಕ್ಷಣಿಕ ಸಂಯೋಜಕ ಎಸ್.ಎನ್.ಕಾಕತ್ಕರ್, ಕಾಲೇಜು ಉಪ ಪ್ರಾಂಶುಪಾಲೆ ನಂದಕುಮಾರಿ, ಆಡಳಿತಾಂಗ ಕುಲಸಚಿವ ಡಾ.ಶ್ರೀಧರ ಭಟ್, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಜಿ.ಆರ್.ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಶಿಸ್ತುಪಾಲನಾ ಸಮಿತಿ ಸಂಯೋಜಕ ನಟರಾಜ್ ಎಚ್.ಕೆ. ಸ್ವಾಗತಿಸಿದರು. ಮುಖ್ಯ ಸಂಯೋಜಕ ಶ್ರೇಯಸ್ ಬಿ. ವಂದಿಸಿದರು. ಅಭಿಲಾಷ್ ಕಾರ್ಯಕ್ರಮ ನಿರೂಪಿಸಿದರು.
ಗುಣಮಟ್ಟದ ಶಿಕ್ಷಣ, ಸಂಸ್ಕೃತಿ, ಮೌಲ್ಯ ಕಲಿಕೆ ನಮ್ಮ ಆಶಯವಾಗಿದ್ದು, ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಪೂರಕವಾದ ವ್ಯವಸ್ಥೆಗಳು ನಮ್ಮಲ್ಲಿವೆ. ಆದರೆ ಅಂತಿಮವಾಗಿ ಪರಿಶ್ರಮವೆಂಬುದು ವಿದ್ಯಾರ್ಥಿಗಳದ್ದೇ ಆಗಿರುತ್ತದೆ. ಅವಕಾಶಗಳನ್ನು ವರವಾಗಿ ಪರಿವರ್ತಿಸಿಕೊಳ್ಳಬೇಕು. ಪಾಲಕರು ಮಕ್ಕಳ ಕಲಿಕಾ ಪ್ರಗತಿ ಬಗ್ಗೆ ಗಮನ ಇರಿಸಬೇಕು. ಡಾ.ವಿಶ್ವನಾಥ ಪಿ. ಪ್ರಾಂಶುಪಾಲ